ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಉಂಟಾಗಿರುವ ಸಂದರ್ಭದಲ್ಲಿ ಪಾಕಿಸ್ತಾನ ಸೇನೆ ಮತ್ತು ಐಎಸ್ಐಗೆ ಮಾಹಿತಿ ಒದಗಿಸಿದ ಆರೋಪದ ಮೇಲೆ ಹರಿಯಾಣದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ದೇವೇಂದ್ರ ಸಿಂಗ್ ಪಂಜಾಬ್ನ ಕಾಲೇಜುವೊಂದರಲ್ಲಿ ಎಂಎ ರಾಜ್ಯಶಾಸ್ತ್ರ ವಿದ್ಯಾರ್ಥಿಯಾಗಿದ್ದು, ಮೇ 12ರಂದು ವಶಕ್ಕೆ ಪಡೆಯಲಾಯಿತು. ಅವನು ತನ್ನ ಫೇಸ್ಬುಕ್ ಪ್ರೊಫೈಲ್ಗೆ ಭಾರತೀಯ ಮಿಲಿಟರಿಯ ಬಂದೂಕುಗಳು ಮತ್ತು ಪಿಸ್ತೂಲ್ಗಳ ಫೋಟೋಗಳನ್ನು ಅಪ್ಲೋಡ್ ಮಾಡಿದ್ದನು.
ಈ ಬಗ್ಗೆ ವಿಚಾರಣೆಯ ಸಮಯದಲ್ಲಿ ಆ ವಿದ್ಯಾರ್ಥಿ ಕಳೆದ ವರ್ಷ ನವೆಂಬರ್ನಲ್ಲಿ ಕರ್ತಾರ್ಪುರ ಕಾರಿಡಾರ್ ಮೂಲಕ ಪಾಕಿಸ್ತಾನಕ್ಕೆ ಪ್ರಯಾಣಿಸಿದ್ದ ಎಂದು ತಿಳಿದುಬಂದಿದೆ. ನಂತರ ಅವನು ಐಎಸ್ಐ ಕಾರ್ಯಕರ್ತರೊಂದಿಗೆ ಸಂವಹನ ನಡೆಸಲು ಪ್ರಾರಂಭಿಸಿದ್ದನು. ಅವರು ಆತ ನೀಡುವ ಮಾಹಿತಿಗೆ ಬದಲಾಗಿ ಅವನಿಗೆ ಹಣವನ್ನು ನೀಡುತ್ತಿದ್ದರು ಎಂಬುದು ಗೊತ್ತಾಗಿದೆ.
ಪೊಲೀಸರ ಪ್ರಕಾರ, ಆ ವಿದ್ಯಾರ್ಥಿ ಪಟಿಯಾಲ ಮಿಲಿಟರಿ ಕಂಟೋನ್ಮೆಂಟ್ನ ಫೋಟೋಗಳನ್ನು ಹಂಚಿಕೊಂಡಿದ್ದನು. ಅವನ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಅದನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಅವನ ಬ್ಯಾಂಕ್ ವಹಿವಾಟುಗಳನ್ನು ಸಹ ಪರಿಶೀಲನೆಗೆ ಒಳಪಡಿಸಲಾಗಿದೆ. ಒಂದು ವಾರದೊಳಗೆ ಹರಿಯಾಣ ರಾಜ್ಯದಲ್ಲಿ ಇದು ಎರಡನೇ ಬಂಧನವಾಗಿದೆ. ಮೇ 10ರಂದು ಕದನ ವಿರಾಮದೊಂದಿಗೆ ಕೊನೆಗೊಂಡ ಭಾರತ-ಪಾಕಿಸ್ತಾನ ಸಂಘರ್ಷದ ನಂತರ ಈ ಬಂಧನಗಳು ನಡೆದಿವೆ.














