ಮನೆ ರಾಜ್ಯ ಹುಣಸೂರು ತಾಲೂಕು ಕಚೇರಿಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ದಿಢೀರ್ ಭೇಟಿ: ಅಧಿಕಾರಿಗಳಿಗೆ ತರಾಟೆ

ಹುಣಸೂರು ತಾಲೂಕು ಕಚೇರಿಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ದಿಢೀರ್ ಭೇಟಿ: ಅಧಿಕಾರಿಗಳಿಗೆ ತರಾಟೆ

0

ಹುಣಸೂರು: ತಾಲೂಕು ಕಚೇರಿಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ದಿಢೀರ್ ಭೇಟಿ ನೀಡಿ ಇಲಾಖೆ ಸಿಬ್ಬಂದಿಗೆ ಚುರುಕು ಮುಟ್ಟಿಸಿದರು.

ಸಾರ್ವಜನಿಕರಿಗೆ ಕಂದಾಯ ಇಲಾಖೆ ಮೌಲ್ಯಯುತ ಸೇವೆ ಸಲ್ಲಿಸಿ ವಿಶ್ವಾಸ ಗಳಿಸುವ ಬದಲಿಗೆ ಇಲಾಖೆ ಸಿಬ್ಬಂದಿ ಅರ್ಜಿಗಳನ್ನು ವಿಲೆ ಇಟ್ಟು ನಾಗರಿಕರಿಗೆ ಹಿಂಸೆ ನೀಡುವ ಪ್ರವೃತ್ತಿಯಿಂದ ಇಲಾಖೆ ಮೇಲೆ ಅಸಹ್ಯ ಬರುವಂತಾಗಿದೆ ಎಂದು ಗುಡುಗಿದರು.

ರಾಜ್ಯ ಸರ್ಕಾರ ಪೌತಿ ಖಾತೆ ಅಭಿಯಾನ ನಡೆಸಿ ಅರ್ಜಿ ನೀಡಿದ ನಾಗರಿಕರಿಗೆ ಪೌತಿ ಖಾತೆ ಮಾಡಲು ಕ್ರಮಹಿಸಲು ಸೂಚಿಸಿದ್ದರೂ ಹುಣಸೂರು ಕೇಂದ್ರದಲ್ಲಿ ಆರಂಭವೇ ಆಗಿಲ್ಲ ಎಂದು ಶಿರಸ್ತೆದಾರ ಶ್ರೀಪಾದ್ ಅನ್ನು ತರಾಟೆ ತೆಗೆದುಕೊಂಡರು.

ಪೋಡಿ ಆಂದೋಲನಕ್ಕೆ ಪೂರಕವಾಗಿ ಆಗತ್ಯ ಬೇಕಿರುವ 1-5 ಮಾಡಿದ ಬಳಿಕ ದುರಸ್ಸಿಗೆ ಕಳುಹಿಸಿ ಖಾತೆ ಮಾಡಿಸುವ ಕೆಲಸ ಆಗಬೇಕಿದೆ. ಈ ಕೆಲಸವೂ ನಡೆದಿಲ್ಲ. ಕಚೇರಿಯಲ್ಲಿ ಪ್ರತಿಯೊಬ್ಬರ ಮೇಜಿನ ಮೇಲೆ ಕಡತ ಇಟ್ಟುಕೊಂಡು ಸಾರ್ವಜನಿಕರಿಗೆ ಕೆಲಸ ಮಾಡುತ್ತಿರುವುದಾಗಿ ಬಿಂಬಿಸುತ್ತಿದ್ದೀರಿ ಎಂದು ಆಸಮಾಧಾನ ವ್ಯಕ್ತಪಡಿಸಿದರು.

ಕಂದಾಯ ಇಲಾಖೆಗೆ ಬರುವ ಅರ್ಜಿಯನ್ನು ಇ- ಆಫೀಸ್ ಆಪ್ ನಲ್ಲಿ ನೊಂದಣಿ ಮಾಡಿಕೊಳ್ಳುವಂತೆ ಸೂಚಿಸಿ ಜಿಲ್ಲಾವಾರು ತರಬೇತಿ ನೀಡಿದ್ದರೂ ಬಳಸುತ್ತಿಲ್ಲ. ಹುಣಸೂರು ಕಂದಾಯ ಇಲಾಖೆಯಲ್ಲಿ ಇ ಅಪ್ ಬಳಸದೆ ಎಷ್ಟು ಅರ್ಜಿಗಳು ಬಂದಿದೆ ಎಂಬುದು ತಿಳಿಯದಾಗಿದೆ.

ಕಂದಾಯ ಇಲಾಖೆ ಇ- ಆಫೀಸ್ ವೆಬ್ ಸೈಟ್ ತೆರೆಯಲು ಸಿಬ್ಬಂದಿಗೆ ಸೂಚಿಸಿದ ಸಚಿವರು, ಕೆಲವು ಸಮಯ ಗುಮಾಸ್ತರೊಂದಿಗೆ ಕಾದು ನಿಂತರಾದರು ವೆಬ್ ಸೈಟ್ ತೆರೆಯುವಲ್ಲಿ ಸಿಬ್ಬಂದಿ ವೈಫಲ್ಯತೆ ಕಂಡು ಕೆಂಡಮಂಡಲವಾದರು.

ನಿತ್ಯ ಇ-ಆಫೀಸ್ ತೆರೆದು ಸ್ವೀಕೃತ ಅರ್ಜಿಗಳನ್ನು ಆನ್ ಲೈನ್ ನಲ್ಲಿ ದಾಖಲಿಸುವ ಪರಿಪಾಠ ಅಳವಡಿಸಿಕೊಂಡಿದ್ದರೆ ಕೆಲಸ ನಿರ್ವಹಿಸಲು ಆಗುತ್ತಿತ್ತು, ವೆಬ್ ತೆರೆಯಲು ಬಾರದ ನಿಮಗೆ ಸಾರ್ವಜನಿಕರ ಅಹವಾಲು ದಾಖಲಿಸಲು ಬರುವುದಾದರೂ ಹೇಗೆ ? ಎಂದರು.

ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಹುಣಸೂರು ತಾಲೂಕಿನಲ್ಲಿ ಪೌತಿ ಖಾತೆ ಮತ್ತು 1-5 ಅಭಿಯಾನ ನಡೆಸುವಂತೆ ಸೂಚಿಸಿದ್ದೇನೆ. ಮುಂದಿನ 15 ದಿನದೊಳಗಾಗಿ ಇಲಾಖೆಯಲ್ಲಿ ಅಭಿಯಾನ ನಡೆದು ಉಪವಿಭಾಗಾಧಿಕಾರಿ ಸಮಗ್ರ ಮಾಹಿತಿ ನೀಡಬೇಕು ಎಂದು ಸೂಚಿಸಿದರು.

ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿ ಬರಪರಿಹಾರದ ಪಟ್ಟಿಯಲ್ಲಿ ರಾಗಿ ಕೈ ಬಿಟ್ಟಿಲ್ಲ., ರಾಜ್ಯದ ಆದೇಶದಲ್ಲಿ ಕೈ ಬಿಟ್ಟಿದ್ದರೆ ಕೃಷಿ ಸಚಿವಾಲಯದ ಗಮನಕ್ಕೆ ತಂದಲ್ಲಿ ಸೂಕ್ತ ಕ್ರಮವಹಿಸುತ್ತೇನೆ. ಸ್ಥಳಿಯವಾಗಿ ಕೈಬಿಟ್ಟಿದಲ್ಲಿ ಜಿಲ್ಲಾಧಿಕಾರಿ ಗಮನಕ್ಕೆ ತಂದು ಸರಿಪಡಿಸಲು ಸೂಚಿಸುತ್ತೇನೆ ಎಂದರು.

ಹಿಂದಿನ ಲೇಖನSSC : 121 ಸಹಾಯಕ, ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ
ಮುಂದಿನ ಲೇಖನಆನ್ ಲೈನ್ ನಲ್ಲಿ ಬ್ಯುಸಿನೆಸ್ ಮಾಡುವ ಆಫರ್ ನೀಡಿ ೪೨.೮೦ ಲಕ್ಷ ವಂಚನೆ