ಮನೆ ರಾಜ್ಯ ಕೇಂದ್ರ ನೀಡಿದ ಅನುದಾನ ಬಳಕೆಯಲ್ಲಿ ಕಾಂಗ್ರೆಸ್ ಸರ್ಕಾರ ವಿಫಲ : ಪ್ರಲ್ಹಾದ್ ಜೋಶಿ

ಕೇಂದ್ರ ನೀಡಿದ ಅನುದಾನ ಬಳಕೆಯಲ್ಲಿ ಕಾಂಗ್ರೆಸ್ ಸರ್ಕಾರ ವಿಫಲ : ಪ್ರಲ್ಹಾದ್ ಜೋಶಿ

0

ಬೆಂಗಳೂರು : ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ ಎಂಬ ಆರೋಪವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿಟ್ಟ ನಂತರ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಅಂಕಿಅಂಶಗಳೊಂದಿಗೆ ತಿರುಗೇಟು ನೀಡಿದ್ದಾರೆ.

ಕೇಂದ್ರದಿಂದ ರಾಜ್ಯಕ್ಕೆ ಬಿಡುಗಡೆಯಾದ ಅನುದಾನವನ್ನು ಸರಿಯಾಗಿ ಬಳಸದೆ, ತಮ್ಮ ಹಣಕಾಸು ನಿರ್ವಹಣೆಯ ಅಸಮರ್ಥತೆ ಮುಚ್ಚಿಹಾಕಲು ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಜೋಶಿ ಟೀಕಿಸಿದ್ದಾರೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯ ಎಕ್ಸ್​​ನಲ್ಲಿ ಅಂಕಿಅಂಶ ಸಮೇತ ಜೋಶಿ ಮಾಹಿತಿ ನೀಡಿದ್ದು, ಕೇಂದ್ರದಿಂದ ಹಣ ಬಿಡುಗಡೆಯಾಗದ ಒಂದೇ ಒಂದು ಯೋಜನೆಯನ್ನು ಸಿದ್ದರಾಮಯ್ಯ ಹೆಸರಿಸಲಿ ನೋಡೋಣ ಎಂದು ಸವಾಲೆಸೆದಿದ್ದಾರೆ. ರಾಜಕೀಯ ಲಾಭಕ್ಕಾಗಿ ತಪ್ಪು ದೋಷಾರೋಪಣೆ ಮಾಡಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಮತ್ತು ಅವರ ಸರ್ಕಾರ ಕೇಂದ್ರದ ಮೇಲೆ ಆರೋಪ ಹೊರಿಸುತ್ತಲೇ ಇದ್ದಾರೆ. ತಮ್ಮ ಅಸಮರ್ಥತೆ ಮತ್ತು ಕಾಂಗ್ರೆಸ್ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿನ ವೈಫಲ್ಯವನ್ನು ಮುಚ್ಚಿಹಾಕಲು ಅವರು ಈ ರೀತಿ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

ಕೇಂದ್ರ ಸರ್ಕಾರದಿಂದ ಬರಬೇಕಾದ 4,195 ಕೋಟಿ ರೂ. ಅನುದಾನ ಬಾಕಿ ಇದೆ ಎಂದು ಸಿದ್ದರಾಮಯ್ಯ ದೂರುತ್ತಿರುವುದು ಸರಿಯಲ್ಲ ಎಂದು ಜೋಶಿ ಟೀಕಿಸಿದ್ದಾರೆ. ಪಿಎಂಎವೈ (ಗ್ರಾಮೀಣ), ಸ್ವಚ್ಛ ಭಾರತ ಮಿಷನ್ (ನಗರ), ಮುಂತಾದ ಹಲವು ಪ್ರಮುಖ ಯೋಜನೆಗಳು ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಕೇಂದ್ರ ಯೋಜನೆಗಳ ಅಡಿಯಲ್ಲಿ 5,000 ಕೋಟಿ ರೂಪಾಯಿಗೂ ಹೆಚ್ಚು ಹಣ ಲಭ್ಯವಿದೆ ಎಂದು ಸಿದ್ದರಾಮ್ಯ ಅವರ ಸರ್ಕಾರದ ಖಜಾನೆಯ ಮೂಲಗಳೇ ನಮಗೆ ತಿಳಿಸಿವೆ ಎಂದು ಅವರು ಹೇಳಿದ್ದಾರೆ.

ಈಗಾಗಲೇ ಕೇಂದ್ರದಿಂದ ನೀಡಲಾಗಿರುವ ಹಣವನ್ನು ಕರ್ನಾಟಕವು ಸಂಪೂರ್ಣವಾಗಿ ಬಳಸಿಕೊಂಡಿದ್ದು, ಆ ನಂತರವೂ ಕೇಂದ್ರ ಸರ್ಕಾರ  ನಿರ್ದಿಷ್ಟ ಯೋಜನೆಗೆ ಅನುದಾನವನ್ನು ತಡೆಹಿಡಿದಿದೆ ಎನ್ನಬಹುದಾದ ಒಂದು ನಿರ್ದಿಷ್ಟ ಯೋಜನೆ ಯಾವುದೆಂಬುದನ್ನು ಸ್ಪಷ್ಟಪಡಿಸಲಿ ನೋಡೋಣ. ಯಾಕೆಂದರೆ, ಕೇಂದ್ರದಿಂದ ಬಿಡುಗಡೆಯಾದ ಹಣವನ್ನು ಖರ್ಚು ಮಾಡುವಲ್ಲಿಯೂ ಕರ್ನಾಟಕ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಜೋಶಿ ಟೀಕಿಸಿದ್ದಾರೆ.

ವಿಪರ್ಯಾಸವೆಂದರೆ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡ, ಕಾಂಗ್ರೆಸ್‌ನ ಜನಪ್ರಿಯ ಗ್ಯಾರಂಟಿ ಯೋಜನೆಗಳಿಗೆ 40,000 ಕೋಟಿ ರೂ. ಮೀಸಲಿಡಬೇಕಾಗಿತ್ತು ಎಂದು ಈ ಹಿಂದೆ ಒಪ್ಪಿಕೊಂಡಿದ್ದರು. ಇದರಿಂದಾಗಿ ಅಭಿವೃದ್ಧಿ ಯೋಜನೆಗಳಿಗೆ ಯಾವುದೇ ಹಣ ಉಳಿದಿಲ್ಲ ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದರು

ಕರ್ನಾಟಕದ ಜನತೆಗೆ ಜವಾಬ್ದಾರಿಯುತ ಆಡಳಿತ ಬೇಕೇ ವಿನಃ ನಿರಂತರ ರಾಜಕೀಯ ಆರೋಪ-ಪ್ರತ್ಯಾರೋಪಗಳು ಮತ್ತು ದಾರಿ ತಪ್ಪಿಸುವ ನಿರೂಪಣೆಗಳಲ್ಲ. ಕಾಂಗ್ರೆಸ್ ಸರ್ಕಾರ ಆಧಾರ ರಹಿತ ಆರೋಪಗಳನ್ನು ಮಾಡುವುದನ್ನು ನಿಲ್ಲಿಸಬೇಕು. ಈಗಾಗಲೇ ತನ್ನ ಬಳಿ ಇರುವ ಗಣನೀಯ ಪ್ರಮಾಣದ ಅನುದಾನವನ್ನು ಬಳಸಿಕೊಳ್ಳಲಿ ಎಂದು ಜೋಶಿ ಆಗ್ರಹಿಸಿದ್ದಾರೆ.