ಮಂಡ್ಯ: ಜಿಲ್ಲೆಯಲ್ಲಿ ಅಕ್ರಮವಾಗಿ ಕ್ರಿಕೆಟ್ ಬೆಟ್ಟಿಂಗ್ ವೇಶ್ಯಾವಾಟಿಕೆ ಹಾಗೂ ಇನ್ನಿತರ ಅಕ್ರಮ ಚಟುವಟಿಕೆಗಳು ಹೆಚ್ಚಾಗುತ್ತಿವೆ ಪೊಲೀಸ್ ಇಲಾಖೆಯವರು ಎಚ್ಚೆತ್ತುಕೊಂಡು ಇಂತಹಾ ಪ್ರಕರಣಗಳು ಜಿಲ್ಲೆಯಲ್ಲಿ ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಎಚ್ಚರಿಸಿದರು.
ಇಂದು ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮಂಡ್ಯ ವಿಧಾನಸಭಾ ಕ್ಷೇತ್ರದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ರೌಡಿಗಳು ಹಾವಳಿ ಹೆಚ್ಚಾಗುತ್ತಿವೆ, ಇದರಿಂದ ಜನಸಾಮಾನ್ಯರಲ್ಲಿ ಶಾಂತಿ ಸುವ್ಯವಸ್ಥೆ ಹದಗೆಡುತ್ತಿದೆ, ಪೊಲೀಸ್ ಇಲಾಖೆ ಇದರ ಕುರಿತಾಗಿ ಹೆಚ್ಚಿನ ಗಮನ ಹರಿಸಿ ರೌಡಿಗಳನ್ನು ಮಟ್ಟಹಾಕಬೇಕು ಎಂದು ಆಗ್ರಹಿಸಿದರು.
ಮೇ.29 ತಾರೀಕಿನಿಂದ 2025-26 ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಲಿದ್ದು, 2024-25 ನೇ ಸಾಲಿನಲ್ಲಿ ಮಂಡ್ಯ ಉತ್ತರ ಮತ್ತು ದಕ್ಷಿಣ ವಲಯ ಸೇರಿದಂತೆ 1 ರಿಂದ 10 ತರಗತಿಯಲ್ಲಿ 22,254 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ, ಎಲ್ಲಾ ಶಾಲೆಗಳ ಶೌಚಾಲಯ, ಶಾಲಾ ಆವರಣ, ಅಡುಗೆ ಪಾತ್ರೆಗಳು ಸೇರಿದಂತೆ ಇನ್ನಿತರ ಎಲ್ಲಾ ಕೊಠಡಿಗಳನ್ನು ಸ್ವಚ್ಚಗೊಳಿಸಿ ನೈರ್ಮಲ್ಯ ಕಾಪಾಡಿ, ಪಠ್ಯ ಪುಸ್ತಕಗಳು ಈಗಾಗಲೇ ಜಿಲ್ಲೆಗೆ ಬಂದಿದ್ದು ನಾಳೆಯಿಂದ ಶಾಲೆಗಳಿಗೆ ವಿತರಿಸಲಾಗುವುದು, ಈ ಬಾರಿಯ ಜಿಲ್ಲೆಯ ಫಲಿತಾಂಶ ಉತ್ತಮಗೊಳಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳಾದ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ 30 ಲಕ್ಷ ವಾರ್ಷಿಕ ಗುರಿಯಾಗಿದ್ದು 28.5 ಲಕ್ಷ ಗುರಿ ಸಾಧನೆಯಾಗಿದೆ, ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ 29 ಲಕ್ಷ ವಾರ್ಷಿಕ ಗುರಿಯಾಗಿದ್ದು 24.9 ಲಕ್ಷ ಗುರಿ ಸಾಧನೆಯಾಗಿದೆ, 82 ಜನರಿಗೆ ತೆಂಗು, ಅಡಿಕೆ ಹಾಗೂ ಸೀಭೆ ಗಿಡಗಳನ್ನು ನರೇಗಾ ಯೋಜನೆಯಡಿ ನೀಡಲಾಗಿದೆ, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯಿಂದ ನೀಡಲಾಗುವುದು ಸೌಲಭ್ಯಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಿ ಎಂದು ಹೇಳಿದರು.
ಕಚ್ಚಾ ರೇಷ್ಮೆ ಉತ್ಪಾದನೆಯಲ್ಲಿ 3069.576 ಮೆಟ್ರಿಕ್ ಟನ್ ವಾರ್ಷಿಕ ಗುರಿ ಹೊಂದಲಾಗಿದೆ, ಪ್ರಸ್ತುತ ಮಾಹೆಯಲ್ಲಿ 2892.8 ಮೆಟ್ರಿಕ್ ಟನ್ ಉತ್ಪಾದಿಸಿ ಶೇ 94.20 ರಷ್ಟು ಗುರಿ ಸಾಧನೆಯಾಗಿದೆ, ದ್ವಿತಳಿ ರೇಷ್ಮೆ ಉತ್ಪಾದನೆಯಲ್ಲಿ 416.570 ಮೆಟ್ರಿಕ್ ಟನ್ ವಾರ್ಷಿಕ ಗುರಿ ಹೊಂದಲಾಗಿದ್ದು, ಪ್ರಸ್ತುತ ಮಾಹೆಯವರೆಗೆ 345.544 ಮೆಟ್ರಿಕ್ ಟನ್ ಉತ್ಪಾದಿಸಿ ಶೇ 82.90 ರಷ್ಟು ಗುರಿ ಸಾಧನೆಯಾಗಿದೆ ಎಂದು ತಿಳಿಸಿದರು.
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಶೇ 70 ರಷ್ಟು ಜಾನುವಾರುಗಳಿಗೆ ಈಗಾಗಲೇ ವ್ಯಾಕ್ಸಿನೇಷನ್ ನೀಡಲಾಗಿದೆ, ಜಾನುವಾರುಗಳಿಗೆ ಇನ್ಸೂರೆನ್ಸ್ ಮಾಡಿಸಿ, ಜಿಲ್ಲೆಯಲ್ಲಿ ಔಷಧಿಗಳ ಲಭ್ಯತೆ ಇದ್ದು 15 ಜನ ವೈದ್ಯರ ಕೊರತೆಯಿದೆ, ಮುಂದಿನ ದಿನಗಳಲ್ಲಿ ವೈದ್ಯರನ್ನು ನೇಮಕ ಮಾಡಲಾಗುವುದು, ಅಧಿಕಾರಿಗಳು ಪಶು ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಾರ್ವಜನಿಕರಿಗೆ ಸ್ಪಂದಿಸಿ ಎಂದರು.
ಮAಡ್ಯ ತಾಲೂಕಿನಲ್ಲಿ 32 ಮೀನುಗಾರಿಕೆ ಇಲಾಖೆಗೆ ಒಳಪಡುವ ಕೆರೆಗಳಿದ್ದು 32 ಕೆರೆಗಳಿಗೂ ಮೀನು ಮರಿಗಳನ್ನು ಬಿಡಲಾಗಿದೆ, ಶೀಘ್ರದಲ್ಲೆ ಜಿಲ್ಲಾ ಪಂಚಾಯತ್ ವತಿಯಿಂದ ಅನುಮೋದನೆ ಪಡೆದು ದೋಣಿಗಳನ್ನು ನೀಡಲಾಗುವುದು, ಮತ್ಸ್ಯಾಶ್ರಯ ಯೋಜನೆಯಡಿ 2024-25 ಸಾಲಿನಲ್ಲಿ 25 ಮನೆಗಳ ನೀಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಮಂಡ್ಯ ತಾಲೂಕಿನಲ್ಲಿ ವಿದ್ಯುತ್ ಕೇಬಲ್ ಗಳನ್ನು ಅಳವಡಿಸಬೇಕಾದರೆ ಜಾಗೃತವಾಗಿ ಉತ್ತಮ ಗುಣಮಟ್ಟದ ಕೇಬಲ್ ಗಳನ್ನು ಅಳವಡಿಸಿ, ಮಳೆಗಾಲವಾದುದರಿಂದ ವಿದ್ಯುತ್ ವ್ಯತ್ಯಯ ಹೆಚ್ಚಾಗಿ ಉಂಟಾಗುತ್ತದೆ, ಅಧಿಕಾರಿಗಳು ಇದಕ್ಕೊಂದು ಶಾಶ್ವತ ಪರಿಹಾರ ಕಂಡು ಹಿಡಿದು, ಮಂಡ್ಯ ನಗರದಲ್ಲಿ ನಿರಂತರ ವಿದ್ಯುತ್ ಪೂರೈಕೆ ಮಾಡೋಣ ಎಂದು ಹೇಳಿದರು.
ಸರ್ಕಾರದ ಆದೇಶದಂತೆ ರೈತರಿಗೆ 7 ಗಂಟೆಗಳ ಕಾಲ ವಿದ್ಯುತ್ ನೀಡಬೇಕು ಆದರಲ್ಲಿ ಯಾವುದೇ ವ್ಯತ್ಯಾಸ ಉಂಟಾಗಬಾರದು. 500 ಟಿ.ಸಿ. ಗಳು ಮಂಡ್ಯ ತಾಲ್ಲೂಕಿಗೆ ಅಗತ್ಯವಿದ್ದು ಶೀಘ್ರವಾಗಿ ಟಿ.ಸಿ. ಗಳನ್ನು ಅಳವಡಿಸುವ ಕೆಲಸ ಮಾಡಲಾಗುತ್ತದೆ ಎಂದರು.
ಮಂಡ್ಯ ನಗರವನ್ನು ಸುಂದರವಾಗಿಸಿಗುವುದು ನಮ್ಮ ಮೊದಲ ಆದ್ಯತೆ ಅದೇ ರೀತಿ ನಗರದ ಮೈಸೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಡಿವೈಡರ್ ಗಳಲ್ಲಿ ಆಕರ್ಷಕ ಹೂವಿನ ಸಸಿಗಳನ್ನು ನೆಡೆಬೇಕಿದೆ. ಸಾರ್ವಜನಿಕರು ಜಾನುವಾರುಗಳನ್ನು ಹೆದ್ದಾರಿಗೆ ಬಿಡದಂತೆ ಅರಿವು ಮೂಡಿಸಬೇಕು, ನಗರದ ಎಲ್ಲಾ ಅಂಗಡಿ ಮಳಿಗಳಲ್ಲಿ ಶೇ. 60 ರಷ್ಟು ಕನ್ನಡ ನಾಮಫಲಕಗಳನ್ನು ಅಳವಡಿಸುವಂತೆ ನೋಡಿಕೊಳ್ಳಬೇಕು, ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕೆರಗೋಡಿನ ಪಂಚಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿಗಾಗಿ ಮುಖ್ಯ ಮಂತ್ರಿಗಳ ನಿಧಿಯಿಂದ 5 ಕೋಟಿ ನೀಡಲಾಗುವುದು ಹಾಗೂ ಬಸರಾಳಿನ ಕಾಲಭೈರವ ದೇವಾಲಯಕ್ಕೆ 3 ಕೋಟಿ ಅನುದಾನವನ್ನು ಬಿಡುಗಡೆ ಮಾಡಿ ಅಭಿವೃದ್ಧಿ ಪಡಿಸಲಾಗುವುದು. ಅಧಿಕಾರಿಗಳು ಜಿಲ್ಲೆಯಲ್ಲಿ ಇರುವ ಪುರಾತನ ದೇವಾಲಯಗಳ ರಕ್ಷಣೆಯನ್ನು ಮಾಡಿ ಎಂದರು.














