ಮನೆ ರಾಜ್ಯ ಕರ್ನಾಟಕದ ಇತಿಹಾಸದಲ್ಲಿ ಅತಿ ಹೆಚ್ಚು ಸಾಲ ತೆಗೆದುಕೊಂಡ ಸರ್ಕಾರ ಸಿದ್ದರಾಮಯ್ಯಗೆ ಸಲ್ಲುತ್ತದೆ : ಬಸವರಾಜ ಬೊಮ್ಮಾಯಿ...

ಕರ್ನಾಟಕದ ಇತಿಹಾಸದಲ್ಲಿ ಅತಿ ಹೆಚ್ಚು ಸಾಲ ತೆಗೆದುಕೊಂಡ ಸರ್ಕಾರ ಸಿದ್ದರಾಮಯ್ಯಗೆ ಸಲ್ಲುತ್ತದೆ : ಬಸವರಾಜ ಬೊಮ್ಮಾಯಿ ಕಿಡಿ

0

ಬೆಂಗಳೂರು : ಕರ್ನಾಟಕ ಸರ್ಕಾರದ ಆರ್ಥಿಕ ನಿರ್ವಹಣೆ ಬಗ್ಗೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ. ಅವರು ರಾಜ್ಯ ಸರ್ಕಾರದ ಎರಡು ವರ್ಷದ ಆಡಳಿತದ ಹಿನ್ನೆಲೆಯಲ್ಲಿ ಮಾಧ್ಯಮ ಪ್ರಕಟಣೆ ಹೊರಡಿಸಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವೇ ಕರ್ನಾಟಕದ ಇತಿಹಾಸದಲ್ಲಿ ಅತಿ ಹೆಚ್ಚು ಸಾಲ ತೆಗೆದುಕೊಂಡ ಸರ್ಕಾರ ಎಂದು ಆರೋಪಿಸಿದರು.

ಬೊಮ್ಮಾಯಿ ನೀಡಿದ ಮಾಹಿತಿಯ ಪ್ರಕಾರ, ಕಳೆದ ಎರಡು ವರ್ಷಗಳಲ್ಲಿ ರಾಜ್ಯ ಸರ್ಕಾರವು ಎರಡೂವರೆ ಲಕ್ಷ ಕೋಟಿ ರೂಪಾಯಿ ಸಾಲ ತೆಗೆದುಕೊಂಡಿದ್ದು, ಇದು ಕರ್ನಾಟಕದ ಇತಿಹಾಸದಲ್ಲಿ ಭಾರೀ ಪ್ರಮಾಣವಾಗಿದೆ. ಅವರು ಹೇಳಿದರು:

“ಈ ಎರಡು ವರ್ಷಗಳು ಆರ್ಥಿಕವಾಗಿ ಕರ್ನಾಟಕದ ಕರಾಳ ದಿನಗಳಾಗಿವೆ. ಅಭಿವೃದ್ಧಿ ಕಾಮಗಾರಿ ನಿಂತುಹೋಗಿದೆ. ಸರ್ಕಾರ ಸಂಪೂರ್ಣವಾಗಿ ಸಾಲದ ಮೇಲೆ ಅವಲಂಬಿತವಾಗಿದೆ.” ಬೊಮ್ಮಾಯಿ ಆರೋಪಿಸಿದಂತೆ, ಸರ್ಕಾರ ಪೆಟ್ರೋಲ್, ಡಿಸೇಲ್, ಅಬಕಾರಿ, ಹಾಲು, ನೀರು, ಕಸ ಸಂಗ್ರಹ, ಸ್ಟಾಂಪ್ ಡ್ಯೂಟಿ ಮೊದಲಾದ ಎಲ್ಲ ಕ್ಷೇತ್ರಗಳಲ್ಲಿ ಮತ್ತಷ್ಟು ತೆರಿಗೆ ಭಾರ ಹಾಕಿದೆ.

“ಹಿಂದಿನ ವರ್ಷ 40 ಸಾವಿರ ಕೋಟಿ ಹೆಚ್ಚುವರಿ ತೆರಿಗೆ ಹಾಕಿದರೆ, ಈ ವರ್ಷ 60 ಸಾವಿರ ಕೋಟಿ ರೂಪಾಯಿಯ ಹೊಸ ತೆರಿಗೆಗಳನ್ನು ಜನರ ಮೇಲೆ ಹಾಕಲಾಗಿದೆ,” ಎಂದು ಅವರು ದೂರಿದ್ದಾರೆ.

ಬೊಮ್ಮಾಯಿ ಆರೋಪಿಸಿದಂತೆ, ಯಾವುದೇ ನಿರಾವರಿ ಯೋಜನೆ, ಹೆದ್ದಾರಿ ಕಾಮಗಾರಿ, ಅಥವಾ ಮನೆ ನಿರ್ಮಾಣ ಯೋಜನೆಗಳಿಗೆ ರಾಜ್ಯ ಸರ್ಕಾರದಿಂದ ಹಣ ಬಿಡುಗಡೆ ಆಗಿಲ್ಲ. ಕೇಂದ್ರದಿಂದ ಬಂದ ಹಣವನ್ನೂ ಸರಿಯಾಗಿ ಬಳಸಲಾಗುತ್ತಿಲ್ಲ ಎಂಬುದು ಅವರ ದೂರು.

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಬಡವರಿಗೆ ನೆರವಾಗುವ ಬದಲು, ಆರ್ಥಿಕ ಸ್ಥಿತಿಗತಿಯನ್ನು ಇನ್ನಷ್ಟು ಹದಗೆಡಿಸುವಂತಾಗಿದೆ. “ಈ ಸರ್ಕಾರ ಸಾಮಾನ್ಯ ಜನರ ಬಾಯಲ್ಲಿ ಶಾಪವಾಗಿ ಪರಿಣಮಿಸಿದೆ. ಅಭಿವೃದ್ಧಿಗೆ ದೂರವಾದ, ಜನವಿರೋಧಿ, ಭ್ರಷ್ಟ ಆಡಳಿತ ನೀಡುತ್ತಿದೆ” ಎಂದು ತೀವ್ರ ಟೀಕೆಗಳನ್ನು ಮಾಡಿದರು. ಕರ್ನಾಟವನ್ನು ಅಭಿವೃದ್ಧಿ ಮಾಡುವುದಿರಲಿ, ಕರ್ನಾಕವನ್ನು ಸಾಲಗಾರ ರಾಜ್ಯವನ್ನಾಗಿ ಮಾಡಿರುವುದು ಅತ್ಯಂತ ದುರ್ದೈವ. ಯಾವ‌ ಪುರುಷಾರ್ಥಕ್ಕಾಗಿ ಸಾಧನಾ ಸಮಾವೇಶ ಮಾಡುತ್ತಿದೆ ಎಂದು ಜನರು ಕೇಳುತ್ತಿದ್ದಾರೆ. ಇದೊಂದು ಅಭಿವೃದ್ಧಿ ಶೂನ್ಯ ಜನವಿರೋಧಿ ಅತ್ಯಂತ ಭ್ರಷ್ಟ ಸರ್ಕಾರ ಎಂದು ವಾಗ್ದಾಳಿ ನಡೆಸಿದ್ದಾರೆ.