ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಚೊಟ್ಟೆ ನೌಷಾದ್ ಮೇಲೆ ಮಂಗಳೂರು ಸೆಂಟ್ರಲ್ ಜೈಲಿನಲ್ಲಿ ಸಹ ಕೈದಿಗಳಿಂದ ಅಟ್ಯಾಕ್ ನಡೆದಿದೆ. ನೌಷಾದ್ ಮೇಲೆ ಬಿ ಬ್ಯಾರಕ್‌ನ ಕೈದಿಗಳು ಕಲ್ಲುಗಳು ಹಾಗೂ ಸಿಕ್ಕ ಸಿಕ್ಕ ವಸ್ತುಗಳಿಂದ ದಾಳಿ ನಡೆಸಿದ್ದಾರೆ. ಆದರೆ ಅದೃಷ್ಟವಶಾತ್ ನೌಷಾದ್ ಗಂಭೀರ ಗಾಯಗಳಿಲ್ಲದೆ ಪಾರಾಗಿದ್ದಾನೆ ಎಂದು ಮೂಲಗಳು ತಿಳಿಸುತ್ತವೆ.
ನೌಷಾದ್‌ನ ಪೊಲೀಸ್ ಕಸ್ಟಡಿ ಅವಧಿ ಮೇ 19ರಂದು ಮುಕ್ತಾಯವಾಗಿದ್ದು, ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ನಂತರ ಮೈಸೂರು ಜೈಲಿಗೆ ಶಿಫ್ಟ್ ಮಾಡಲು ಸಿದ್ಧತೆ ನಡೆಯುತ್ತಿತ್ತು. ಈ ನಡುವೆ ನೌಷಾದ್ ತನ್ನ ಬಂಧು ಅಥವಾ ಪರಿಚಿತನೊಬ್ಬನನ್ನು ಜೈಲಿನೊಳಗೆ ನೋಡಬೇಕು ಎಂದು ಮನವಿ ಮಾಡಿದ್ದ. ಅದಕ್ಕಾಗಿ ಜೈಲಿನಲ್ಲಿ ಮತ್ತೊಬ್ಬ ಕೈದಿಯನ್ನು ಭೇಟಿ ಮಾಡಲು ಕರೆದೊಯ್ಯಲಾಗುತ್ತಿತ್ತು. ಈ ಸಂದರ್ಭದಲ್ಲಿ, ಬೇರೆ ಕೈದಿಗಳಿಂದ ನೌಷಾದ್ ಮೇಲೆ ಯೋಜಿತ ದಾಳಿ ನಡೆದಿದ್ದು, ಜೈಲು ಆವರಣದಲ್ಲಿ ಕೆಲಕಾಲ ಗೊಂದಲ ಉಂಟಾಗಿದೆ.
ಆರೋಪಿ ನೌಷದ್ ಅಲಿಯಾಸ್ ವಾಮಂಜೂರು ನೌಷದ್ ಅಲಿಯಾಸ್ ಚೊಟ್ಟೆ ನೌಷದ್, ಸುಹಾಸ್ ಶೆಟ್ಟಿಯ ಕೊಲೆಗೆ ಉಳಿದ ಆರೋಪಿಗಳ ಜೊತೆ ಸಂಚು ರೂಪಿಸಿ ಕೊಲೆ ಕೃತ್ಯದಲ್ಲಿ ಭಾಗಿಯಾಗಿದ್ದ. ಇತನ ವಿರುದ್ಧ ಸುರತ್ಕಲ್, ಬಜ್ಪೆ, ಮೂಡಬಿದ್ರಿ, ಮಂಗಳೂರು ಉತ್ತರ ಮತ್ತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ದರೋಡೆಗೆ ಸಂಚು ಸೇರಿದಂತೆ ಒಟ್ಟು 6 ಪ್ರಕರಣಗಳು ದಾಖಲಾಗಿವೆ.














