ಮೈಸೂರು : ಕರ್ನಾಟಕ ರಾಜಕೀಯದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದೆ. ಸಹಕಾರ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಕೆ.ಎನ್. ರಾಜಣ್ಣ ಅವರು ತಮ್ಮ ಮುಂದಿನ ಚುನಾವಣಾ ಭವಿಷ್ಯ ಕುರಿತು ಸ್ಪಷ್ಟತೆ ನೀಡಿದ್ದು, “ಇನ್ನೆಂದಿಗೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ” ಎಂದು ಘೋಷಣೆ ಮಾಡಿದ್ದಾರೆ. ಈ ಮೂಲಕ ಅವರು ಚುನಾವಣಾ ರಾಜಕಾರಣದಿಂದ ನಿವೃತ್ತಿ ಪಡೆಯುತ್ತಿರುವುದಾಗಿ ಪ್ರಕಟಿಸಿದ್ದಾರೆ.
ರಾಜಣ್ಣ ಅವರ ಈ ನಿರ್ಧಾರ, ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಅವರ ನಡುವಿನ ವೈಯಕ್ತಿಕ ಅಸಮಾಧಾನದ ಮಧ್ಯೆ ಬರುತ್ತಿರುವುದು ಗಮನಾರ್ಹ. ಇತ್ತೀಚೆಗೆ ಇಬ್ಬರ ನಡುವಿನ ಮುಸುಕಿನ ಗುದ್ದಾಟ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಕೆಲವರ ಪ್ರಕಾರ ಈ ಬಿಗುವೂ ರಾಜಣ್ಣ ಅವರ ಈ ನಿರ್ಧಾರದ ಹಿಂದೆ ಇರುವ ಪ್ರಮುಖ ಕಾರಣಗಳಲ್ಲಿ ಒಂದಾಗಿರಬಹುದು.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಅವರು, “ನಾನು ಈಗ 75 ವರ್ಷದವನಾಗಿದ್ದೇನೆ. ಮುಂದಿನ ಚುನಾವಣೆ ವೇಳೆಗೆ 78 ವರ್ಷ ಆಗುತ್ತದೆ. ಈ ವಯಸ್ಸಿನಲ್ಲಿ ನಾನೇನು ಮಾಡಬಲ್ಲೆ ಎಂಬುದನ್ನು ನನಗೆ ಗೊತ್ತಿದೆ. ಒಂದು ವೇಳೆ ಸ್ಪರ್ಧಿಸಿ ಗೆದ್ದರೂ, ಜನರ ಸೇವೆ ಮಾಡುವುದು ಕಷ್ಟ. ಆರೋಗ್ಯದ ದೃಷ್ಟಿಯಿಂದ ಕೂಡ ಇದು ಸವಾಲಾಗುತ್ತದೆ. ಹಾಗಾಗಿ ಚುನಾವಣೆಗೆ ಸ್ಪರ್ಧಿಸುವ ಯೋಚನೆ ಇಲ್ಲ” ಎಂದು ಸ್ಪಷ್ಟವಾಗಿ ತಿಳಿಸಿದರು.
ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿದರೂ, ರಾಜಕೀಯದಿಂದ ಸಂಪೂರ್ಣ ನಿವೃತ್ತಿ ಎಂದು ರಾಜಣ್ಣ ಅವರು ಹೇಳಿಲ್ಲ. “ನಾನು ಸಕ್ರಿಯ ರಾಜಕಾರಣದಲ್ಲಿ ಮುಂದುವರೆಯುತ್ತೇನೆ. ಪಕ್ಷದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತೇನೆ. ನನ್ನ ಅನುಭವದ ಆಧಾರದಲ್ಲಿ ಪಕ್ಷಕ್ಕೆ ನನ್ನಿಂದ ಆಗಬಹುದಾದ ಸಹಕಾರವನ್ನೆಲ್ಲಾ ನೀಡುತ್ತೇನೆ” ಎಂದು ಹೇಳಿದರು.
ಬೆಂಗಳೂರು ಮಳೆ ಹಾಗೂ ಪ್ರವಾಹ ಪರಿಸ್ಥಿತಿಯನ್ನು ಡಿಸಿಎಂ ಡಿಕೆ ಶಿವಕುಮಾರ್ ಚೆನ್ನಾಗಿ ನಿಭಾಯಿಸುತ್ತಿದ್ದಾರೆ. ಅವರು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ರಾಜಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು. ಬೆಂಗಳೂರು ನಗರದಲ್ಲಿ ಭಾರಿ ಮಳೆಯಿಂದ ಹಲವೆಡೆ ಹಾನಿಯಾಗಿರುವುದು ನಮ್ಮ ಸ್ವಯಂಕೃತ ಅಪರಾಧದ ಪ್ರತಿಫಲ. ಕೆರೆ, ಕಾಲುವೆ, ಚರಂಡಿ ಒತ್ತುವರಿಯಿಂದ ಈ ಪರಿಸ್ಥಿತಿ ಬಂದಿದೆ. ನೀರು ಹೇಗೆ ಹರಿಯಬೇಕು ಎಂದು ನಾವು ಹೇಳಲು ಸಾಧ್ಯವಿಲ್ಲ. ಅದಕ್ಕೆ ಅದರ ದಾರಿ ಗೊತ್ತಿದೆ ಎಂದು ರಾಜಣ್ಣ ಹೇಳಿದರು.
ಮೈಸೂರು ಅಂದರೆ ನನಗೆ ಬಹಳ ಇಷ್ಟ. ಮೈಸೂರು ವಿವಿಯಲ್ಲೇ ನಾನು ವ್ಯಾಸಂಗ ಮಾಡಿದ್ದೇನೆ. ಇಲ್ಲೇ ಗಣಿತದಲ್ಲಿ ಮಾಸ್ಟರ್ಸ್ ಮಾಡಿದ್ದೇನೆ. ಆಗ ವಿದ್ಯಾರ್ಥಿ ನಾಯಕನಾಗಿದ್ದೆ ಎಂದು ರಾಜಣ್ಣ ನೆನಪಿಸಿಕೊಂಡರು. ಮೈಸೂರಿನ ವಾತಾವರಣ ಅಹ್ಲಾದಕರ ಮತ್ತು ಬಹಳ ಉತ್ತಮ ವಾತಾವರಣ. ಮೈಸೂರಿಗೆ ಅದರದ್ದೇ ಆದ ಗೌರವ ಹಾಗೂ ಇತಿಹಾಸ ಇದೆ. ಮೈಸೂರು ನನಗೆ ತುಂಬಾ ಇಷ್ಟವಾದ ನಗರ ಎಂದು ರಾಜಣ್ಣ ಹೇಳಿದರು.