ಮನೆ ರಾಜ್ಯ ರಾಜ್ಯಕ್ಕೆ ಪ್ರಧಾನಿ ಮೋದಿ: ರೋಡ್‌ ಶೋಗೆ ಸಿದ್ಧತೆ

ರಾಜ್ಯಕ್ಕೆ ಪ್ರಧಾನಿ ಮೋದಿ: ರೋಡ್‌ ಶೋಗೆ ಸಿದ್ಧತೆ

0

ಬೆಂಗಳೂರು (Bengaluru): ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಆಗಮಿಸಲಿದ್ದು, ಅವರು ಭಾಗವಹಿಸುವ ಕಾರ್ಯಕ್ರಮ ಯಶಸ್ವಿಯಾಗಬೇಕು. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಶ್ರಮವಹಿಸಿ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಜೂನ್ 20 ರಂದು ಮೋದಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಅರಮನೆ ಮೈದಾನದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಕರೆಯಲಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ರಾಜ್ಯ ಪ್ರವಾಸದ ಕುರಿತ ಪೂರ್ವ ಸಿದ್ಧತೆ ಸಭೆಯಲ್ಲಿ ಬೊಮ್ಮಾಯಿ ಅವರು ಮಾತನಾಡಿದರು.

ಪ್ರಧಾನಿಗಳು ಬಹಳ ದಿನಗಳ ನಂತರ ರಾಜ್ಯಕ್ಕೆ ಬರ್ತಿದ್ದಾರೆ. ಅವರು ಬೇರೆ ರಾಜ್ಯಗಳಿಗೆ ಹೋದಾಗ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ನಂತರ ಪ್ರವಾಸ ಕೈಗೊಂಡಿದ್ದಾರೆ. ಬಿಜೆಪಿ ಇಲ್ಲದ ಕಡೆಯೂ ದೊಡ್ಡ ಬೆಂಬಲ ಅವರಿಗೆ ಸಿಕ್ಕಿದೆ. ಮೊನ್ನೆ ತಮಿಳುನಾಡಿಗೆ ಹೋಗಿದ್ದಾಗ ಎಷ್ಟೊಂದು ಜನರು ಬೆಂಬಲ ನೀಡಿದ್ರೂ ಎಂಬುದನ್ನು ನೋಡಿದ್ದೇವೆ. ಇದೇ ರೀತಿ ಹಲವು ರಾಜ್ಯಗಳಲ್ಲೂ ಅಭೂತಪೂರ್ವ ಬೆಂಬಲ ಸಿಕ್ಕಿದೆ ಎಂದರು.

ಯಲಹಂಕದಿಂದ ಪ್ರಧಾನಿ ಬರುವಾಗ ಅಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರಿಂದ ಸ್ವಾಗತ ಕೋರಬೇಕು. ಸಾರ್ವಜನಿಕ ಸಭೆಗೆ 50 ರಿಂದ 60 ಸಾವಿರ ಜನ ಸೇರಿಸುವ ಗುರಿ ಹೊಂದಿದ್ದೇವೆ. ಅಲ್ಲಿ ಜನರಿಗೆ ಸರ್ಕಾರದಿಂದ ಅಗತ್ಯ ವ್ಯವಸ್ಥೆ ಆಗುತ್ತದೆ. ಆದರೆ ಜನರನ್ನು ಕರೆಸುವುದು ನಿಮ್ಮ ಜವಬ್ದಾರಿ. ಹೀಗಾಗಿ ಜನರನ್ನು ಸೇರಿಸಿ ಕಾರ್ಯಕ್ರಮ ಯಶಸ್ವಿ ಮಾಡಬೇಕು. ಮತ್ತೆ ಎಲ್ಲಾದರೂ ಒಂದು ಕಡೆ ರೋಡ್ ಶೋಗೂ ಸಿದ್ದತೆ ಆಗಬೇಕು. 18ನೇ ತಾರೀಖಿನ ಒಳಗೆ ಎಲ್ಲ ರೀತಿಯ ಸಿದ್ದತೆ ಆಗಬೇಕು. ಪ್ರಧಾನಿಗಳ ಕಾರ್ಯಕ್ರಮ ಗಂಭೀರವಾಗಿ ತೆಗೆದುಕೊಂಡು, ಶ್ರಮ ವಹಿಸಿ ಜನರನ್ನು ಸೇರಿಸಬೇಕು ಎಂದು ಬೆಂಗಳೂರು ಪಕ್ಷದ ನಾಯಕರಿಗೆ ಸಿಎಂ ಬೊಮ್ಮಾಯಿ ಕರೆ ನೀಡಿದರು.

ಇದು ಮುಂದಿನ ಲೋಕಸಭಾ ಚುನಾವಣೆಯ ದಿಕ್ಸೂಚಿ. ನಮ್ಮ ರಾಜ್ಯದಲ್ಲಿ ಮುಂದೆ ಚುನಾವಣೆ ಬರ್ತಿದೆ. ಈ ವರ್ಷ ಚುನಾವಣಾ ವರ್ಷ ಕೂಡ. ಅವರ ಈ ಕಾರ್ಯಕ್ರಮವನ್ನು ನಾವು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ ಕಟೀಲ್, ಸಚಿವರಾದ ಆರ್.ಅಶೋಕ್, ವಿ. ಸೋಮಣ್ಣ, ಎಸ್.ಟಿ.ಸೋಮಶೇಖರ್‌, ಡಾ.ಅಶ್ವತ್ಥ ನಾರಾಯಣ, ಎಂಟಿಬಿ ನಾಗರಾಜು, ಬೈರತಿ ಬಸವರಾಜ, ಮುನಿರತ್ನ, ಸಂಸದ ತೇಜಸ್ವಿ ಸೂರ್ಯ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣಕುಮಾರ ಸೇರಿದಂತೆ ಬೆಂಗಳೂರು ನಗರದ ಶಾಸಕರು ಮತ್ತು ಪ್ರಮುಖ ನಾಯಕರು ಉಪಸ್ಥಿತರಿದ್ದರು.