ಹಾಸನ: ಇತ್ತೀಚಿನ ದಿನಗಳಲ್ಲಿ ಯುವಜನತೆಯಲ್ಲಿ ಹೃದಯಾಘಾತದಿಂದ ಸಂಭವಿಸುವ ಅನಾಹುತಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದು ತೀವ್ರ ಆತಂಕದ ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ ಹೊಸದಾಗಿ ಹೃದಯವಿದ್ರಾವಕ ಘಟನೆ ಇಂದು ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣದಲ್ಲಿ ನಡೆದಿದ್ದು, 19 ವರ್ಷದ ಯುವತಿ ಬಾತ್ರೂಂನಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ.
ಮೃತ ಯುವತಿಯನ್ನು ಸಂಧ್ಯಾ ಎಂದು ಗುರುತಿಸಲಾಗಿದ್ದು, ಅವಳು ಹೊಳೆನರಸೀಪುರದ ಮಡಿವಾಳ ಬಡಾವಣೆಯ ನಿವಾಸಿ ವೆಂಕಟೇಶ್ ಮತ್ತು ಪೂರ್ಣಿಮಾ ದಂಪತಿಯ ಪುತ್ರಿ. ಸಂಧ್ಯಾ ತನ್ನ ಡಿಪ್ಲೊಮಾ ಅಂತಿಮ ವರ್ಷದ ಅಧ್ಯಯನ ಪೂರ್ಣಗೊಳಿಸಿದ್ದಳು ಮತ್ತು ಭವಿಷ್ಯಕ್ಕೆ ಸಾಕಷ್ಟು ಕನಸುಗಳನ್ನು ಹೊತ್ತಿದ್ದಳು.
ಇಂದು ಬೆಳಗ್ಗೆ ಸಂಧ್ಯಾ ಬಾತ್ರೂಂಗೆ ತೆರಳಿದ್ದ ವೇಳೆ ಅಚಾನಕ್ ಕುಸಿದು ಬಿದ್ದಿದ್ದಳು. ಈ ಘಟನೆ ಗಮನಿಸಿದ ಪೋಷಕರು ತಕ್ಷಣ ಬಾತ್ರೂಂ ಬಾಗಿಲು ಒಡೆದು ಆಕೆಯನ್ನು ಹೊರತೆಗೆಯುವ ಪ್ರಯತ್ನ ಮಾಡಿದರು. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆದರೆ ಅಷ್ಟೊತ್ತಿಗಾಗಲೇ ಸಂಧ್ಯಾ ಉಸಿರು ಚೆಲ್ಲಿದ್ದಳು.














