ಮನೆ ರಾಷ್ಟ್ರೀಯ ಮಳೆಯಿಂದ ಅಡ್ಡಿ : ಒಂದೇ ವೇದಿಕೆಯಲ್ಲಿ ಹಿಂದೂ-ಮುಸ್ಲಿಂ ಜೋಡಿಯ ವಿವಾಹ!

ಮಳೆಯಿಂದ ಅಡ್ಡಿ : ಒಂದೇ ವೇದಿಕೆಯಲ್ಲಿ ಹಿಂದೂ-ಮುಸ್ಲಿಂ ಜೋಡಿಯ ವಿವಾಹ!

0

ಪುಣೆ: ಮದುವೆ ಎಂದರೆ ಕೇವಲ ಎರಡು ಮನಸುಗಳ ಏಕತೆಯ ಕ್ಷಣವಷ್ಟೆ ಅಲ್ಲ; ಅದು ಕುಟುಂಬಗಳ, ಪರಂಪರೆಗಳ, ಸಂಸ್ಕೃತಿಗಳ ಸಮಾಗಮವೂ ಹೌದು. ಈ ನಿಟ್ಟಿನಲ್ಲಿ ಪುಣೆಯ ಒಂದು ಘಟನೆಯು ಧರ್ಮೀಯ ಸಾಮರಸ್ಯ, ಸಹಾನುಭೂತಿ ಮತ್ತು ಸಹಬಾಳ್ವೆಯ ಜೀವಂತ ಉದಾಹರಣೆಯಾಗಿ ಬೆಳಗಿದೆ.

ಪುಣೆಯ ಅಲಂಕಾರನ್ ಲಾನ್ಸ್ ಮೈದಾನದಲ್ಲಿ ಸಂಕ್ರತಿ ಕವಡೆ ಮತ್ತು ನರೇಂದ್ರ ಗಲಾಂಡೆ ಎಂಬ ಹಿಂದೂ ಜೋಡಿಯ ಮದುವೆ ನಡೆಯಬೇಕಿತ್ತು. ಎಲ್ಲಾ ತಯಾರಿಗಳು ಪೂರ್ಣಗೊಂಡಿದ್ದು, ವೇದಿಕೆ ಮಂಗಳ ಕಾರ್ಯಕ್ರಮಕ್ಕೆ ಸಜ್ಜಾಗಿತ್ತು. ಅತಿಥಿಗಳು ಕೂಡಾ ಆಗಮಿಸಿ, ಮದುವೆಯ ಸಂಭ್ರಮದಲ್ಲಿ ತೊಡಗಿದ್ದರು. ಆದರೆ, ಕಾರ್ಯಕ್ರಮ ಆರಂಭವಾಗುವ ಕ್ಷಣದಲ್ಲೇ ಭಾರೀ ಮಳೆ ಸುರಿಯಲು ಆರಂಭವಾಯಿತು.

ಆಕಸ್ಮಿಕವಾಗಿ ಸುರಿದ ಮಳೆ ಮದುವೆ ಕಾರ್ಯಕ್ರಮಕ್ಕೆ ಅಡ್ಡಿಯಾಯ್ತು. ವೇದಿಕೆಯು ಬಯಲು ಸ್ಥಳದಲ್ಲಿದ್ದ ಕಾರಣ ಮಂತ್ರಾಚರಣೆ, ಸಪ್ತಪದಿ ಸೇರಿದಂತೆ ಎಲ್ಲ ಸಂಪ್ರದಾಯಗಳಿಗೆ ಅಡಚಣೆ ಉಂಟಾಯಿತು. ಆ ಕ್ಷಣದಲ್ಲಿ ಮದುವೆ ನಿಂತು ಹೋಗುತ್ತೆ ಎಂಬ ಆತಂಕ ಎಲ್ಲರಲ್ಲೂ ಸೃಷ್ಟಿಯಾಯಿತು.

ಆ ಸಮಯದಲ್ಲಿ ಸಮೀಪದಲ್ಲಿಯೇ ಇರುವುದು ಮುಸ್ಲಿಂ ಜೋಡಿ ಮಾಹೀನ್ ಮತ್ತು ಮೊಹ್ಸಿನ್ ಕಾಜಿ ಅವರ ವಿವಾಹ ಸಮಾರಂಭ. ಆ ಸಭಾಂಗಣವು ಸುರಕ್ಷಿತವಾಗಿ ಒಳಾಂಗಣದಲ್ಲಿತ್ತು. ಮಳೆಯಿಂದ ತೊಂದರೆ ಅನುಭವಿಸುತ್ತಿದ್ದ ಹಿಂದೂ ಕುಟುಂಬದವರೊಬ್ಬರು, ತಮ್ಮ ಮದುವೆ ಪೂರ್ಣಗೊಳಿಸಲು ಸ್ವಲ್ಪ ಕಾಲ ಆ ಸ್ಥಳ ಬಳಸಲು ವಿನಂತಿಸಿದರು. ಈ ಮನವಿಗೆ ಮುಸ್ಲಿಂ ಕುಟುಂಬದವರು ಕೂಡಾ ತಕ್ಷಣ ಸ್ಪಂದಿಸಿ ಸಭಾಂಗಣವನ್ನು ಬಳಸಲು ಅವಕಾಶ ನೀಡಿದರು.

ಅದರಿಂದ ಹಿಂದೂ ಜೋಡಿಯ ಮದುವೆ ಆ ವೇದಿಕೆಯಲ್ಲಿ ಸಂಪ್ರದಾಯದೊಂದಿಗೆ ನೆರವೇರಿತು. ಹಿಂದೂ ಧಾರ್ಮಿಕ ಆಚರಣೆಗಳಿಗೆ ಪೂರ್ಣ ಗೌರವ ನೀಡಲಾಯಿತು. ಈ ವೇಳೆ ಮುಸ್ಲಿಂ ಕುಟುಂಬದ ಸದಸ್ಯರು ಸಹಕರಿಸಿದ ರೀತಿಯು ಅಲ್ಲಿ ಉಪಸ್ಥಿತರಿದ್ದ ಎಲ್ಲರ ಮನಸೂರೆಗೊಂಡಿತು.

ಮದುವೆ ಮುಗಿದ ನಂತರ ಎರಡೂ ಕುಟುಂಬಗಳ ಸದಸ್ಯರು, ಅತಿಥಿಗಳು ಜೊತೆಯಾಗಿ ಔತಣ ಕೂಟದಲ್ಲಿ ಭಾಗವಹಿಸಿದರು. ವಿಭಿನ್ನ ಧರ್ಮಗಳಿಗೆ ಸೇರಿದವರಾಗಿದ್ದರೂ ಸಹಾನುಭೂತಿ, ಮಾನವೀಯತೆ ಮತ್ತು ಪರಸ್ಪರ ಗೌರವದೊಂದಿಗೆ ಒಂದು ಭಾವುಕ ಕ್ಷಣವನ್ನು ಹಂಚಿಕೊಂಡರು.

ಈ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ಪಡೆದುಕೊಂಡಿದ್ದು, ಹಲವು ಮಂದಿ “ಇದು ನಿಜವಾದ ಭಾರತ”, “ಇಂತಹ ಘಟನೆಗಳು ಸಮಾಜದಲ್ಲಿ ಶಾಂತಿಯ ಬೀಜ ಬಿತ್ತುತ್ತವೆ” ಎಂದು ಹೊಗಳಿದ್ದಾರೆ.

ಇದು ಪುಣೆಯಲ್ಲಿ ನಡೆದಿದ್ದರೂ, ಇದೊಂದು ದೇಶದಾದ್ಯಂತ ಧಾರ್ಮಿಕ ಸಹಿಷ್ಣುತೆಯ ಮಾದರಿಯಾಗಿ ಉಳಿಯುವಂತಹ ಘಟನೆಯಾಗಿದೆ. ಅಷ್ಟೇ ಅಲ್ಲ, ಮನುಷ್ಯತ್ವ ಎಲ್ಲಕ್ಕಿಂತ ಮೇಲು ಎಂಬ ಸಂದೇಶವನ್ನೂ ನೀಡುತ್ತಿದೆ.