ಚಿಕ್ಕಬಳ್ಳಾಪುರ: ಪ್ರೇಮ ವಿಫಲತೆಯಿಂದ ಯುವಕನು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಗ್ರಾಮದಲ್ಲಿ ನಡೆದಿದೆ. ತನ್ನ ಸೋದರ ಮಾವನ ಮಗಳ ಜೊತೆ ಮದುವೆಯಾಗಲು ಚಿಂತಿಸುತ್ತಿದ್ದ ಯುವಕನಿಗೆ ಕುಟುಂಬದವರಿಂದ ವಿರೋಧ ವ್ಯಕ್ತವಾದ ನಂತರ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.
27 ವರ್ಷದ ಮಂಜುನಾಥ್ ಎಂಬ ಯುವಕನೇ ಮೃತ ದುರ್ದೈವಿ. ನಿನ್ನೆ ಸಹ ಬಾಲಕಿಯ ಹುಟ್ಟು ಹಬ್ಬದ ಅಂಗವಾಗಿ ಮನೆಗೆ ಹೋಗಿ ವಿಶ್ ಮಾಡಿ ಬಂದಿದ್ದ. ಈ ವೇಳೆ ಬಾಲಕಿಯನ್ನ ಮದುವೆಯಾಗುವುದಾಗಿ ಮಂಜುನಾಥ್ ಹೇಳಿದ್ದು ಇದಕ್ಕೆ ಸೋದರ ಮಾವ ಹಾಗೂ ಅತ್ತೆ ಮಗಳನ್ನ ಕೊಡುವುದಿಲ್ಲ ಎಂದು ಹೇಳಿದ್ದರು. ಇದೇ ನೋವಿನಲ್ಲಿ ಮನೆಗೆ ವಾಪಸ್ ಬಂದಿದ್ದ ಮಂಜುನಾಥ್ ನೇಣಿಗೆ ಶರಣಾಗಿದ್ದಾನೆ ಅಂತ ಮಾಹಿತಿ ತಿಳಿದುಬಂದಿದೆ.
ಮೃತದೇಹವನ್ನ ಚಿಕ್ಕಬಳ್ಳಾಪುರ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದ್ದು, ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














