ದೆಹಲಿ: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನ ಮೇಲೆ ಭಾರತ ನಡೆಸಿದ ಐತಿಹಾಸಿಕ ‘ಆಪರೇಷನ್ ಸಿಂಧೂರ’ ಸೈನಿಕ ಕಾರ್ಯಾಚರಣೆಯ ಲೋಗೋವನ್ನು ಭಾರತೀಯ ಯೋಧರೇ ವಿನ್ಯಾಸಗೊಳಿಸಿದ್ದು ಎಂಬ ಸಂಗತಿ ಬಹಿರಂಗವಾಗಿದೆ.
ಈ ಮಹತ್ವದ ಕಾರ್ಯಾಚರಣೆಯ ಲೋಗೋವನ್ನು ವಿನ್ಯಾಸಗೊಳಿಸಿರುವವರು ಲೆಫ್ಟಿನೆಂಟ್ ಕರ್ನಲ್ ಹರ್ಷ ಗುಪ್ತಾ ಮತ್ತು ಹವಾಲ್ದಾರ್ ಸುರೀಂದರ್ ಸಿಂಗ್, ಎಂದು ಭಾರತೀಯ ಸೇನೆಯ ನಿಯತಕಾಲಿಕ ಪತ್ರಿಕೆ ‘ಬಾತ್ಚೀತ್’ ತಿಳಿಸಿದೆ. ಈ ಅಭೂತಪೂರ್ವ ಕಲಾತ್ಮಕತೆ ಯೋಧರೊಳಗಿನ ಸೃಜನಶೀಲತೆಯ ಉಜ್ವಲ ಉದಾಹರಣೆಯಾಗಿದೆ.
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭೀಕರ ದಾಳಿಯಲ್ಲಿ ಅನೇಕ ಹಿಂದೂ ಪ್ರವಾಸಿಗರು ಉಗ್ರರ ಗುಂಪುಗಳಿಂದ ಹುತಾತ್ಮರಾದರು. ಈ ಘಟನೆ ಭಾರತಾದ್ಯಂತ ಆಕ್ರೋಶ ಎಬ್ಬಿಸಿತ್ತು. ಭಾರತದ ಸೇನೆ ಮತ್ತು ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಂಡು, ಮೇ 7ರಂದು ಪಾಕಿಸ್ತಾನದ ಒಳಭಾಗದಲ್ಲೇ ಇಳಿದು 9 ಉಗ್ರರ ನೆಲೆಗಳನ್ನು ತತ್ತರಗೊಳಿಸಿತು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ‘ಆಪರೇಷನ್ ಸಿಂಧೂರ’ ಎಂಬ ಹೆಸರನ್ನು ನೀಡಿದ್ದು, ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಲೋಗೋ ವಿನ್ಯಾಸದ ಬಗ್ಗೆ ಹೇಳುವಾಗ, ‘ಸಿಂಧೂರ’ ಎಂಬ ಪದವನ್ನು ಬರೆದು ಅದರಲ್ಲಿ ಭಾರತೀಯ ಸ್ತ್ರೀಯರು ಉಪಯೋಗಿಸುವ ಕುಂಕುಮದ ಬಣ್ಣ ಹಾಗೂ ಆಕೃತಿ ಬಳಸಲಾಗಿದ್ದು, ದೇಶದ ಗೌರವವನ್ನು ತೋರಿಸುವಂತಿದೆ. ಇದು ನಾಡಿನ ಸಾಂಸ್ಕೃತಿಕ ಮೌಲ್ಯಗಳಿಗೆ ಸೇನೆಯ ಗೌರವ ಸೂಚನೆಯಾಗಿದೆ.
ಈ ಲೋಗೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಜನಮನ ಗೆದ್ದಿದೆ. ದೇಶದ ಗಡಿ ರಕ್ಷಣೆ ಮಾಡುವ ಯೋಧರು ಕೇವಲ ಯುದ್ಧವೀರರು ಮಾತ್ರವಲ್ಲದೆ, ತಮ್ಮಲ್ಲಿ ಅಗಾಧ ಸಾಂಸ್ಕೃತಿಕ ಭಾವನೆ ಮತ್ತು ಕಲಾತ್ಮಕತೆಯೂ ಹೊಂದಿದ್ದಾರೆ ಎಂಬುದಕ್ಕೆ ಈ ಉದಾಹರಣೆ ಸ್ಪಷ್ಟವಾಗಿದೆ.
ಭಾರತದ ಈ ಕಾರ್ಯಾಚರಣೆಗೆ ದೇಶದ ಜನತೆ ಭಾರಿ ಬೆಂಬಲ ವ್ಯಕ್ತಪಡಿಸುತ್ತಿದ್ದು, ‘ಆಪರೇಷನ್ ಸಿಂಧೂರ’ ಈಗ ಅದು ಭಾರತದ ಗೌರವ ಮತ್ತು ಪ್ರತಿಷ್ಠೆಯ ಸಂಕೇತವಾಗಿದೆ.














