ಮನೆ ರಾಜ್ಯ ಎರಡು ದಶಕಗಳ ಮುನಿಸಿಗೆ ಕೊನೆ: ಹರಿಪ್ರಸಾದ್ ನಿವಾಸದಲ್ಲಿ ಉಪಹಾರ ಸೇವಿಸಿದ ಸಿಎಂ ಸಿದ್ದರಾಮಯ್ಯ!

ಎರಡು ದಶಕಗಳ ಮುನಿಸಿಗೆ ಕೊನೆ: ಹರಿಪ್ರಸಾದ್ ನಿವಾಸದಲ್ಲಿ ಉಪಹಾರ ಸೇವಿಸಿದ ಸಿಎಂ ಸಿದ್ದರಾಮಯ್ಯ!

0

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಅಚ್ಚರಿಯ ಬೆಳವಣಿಗೆಯಾಗಿರುವುದೇನಂದರೆ, ಎರಡು ದಶಕಗಳಷ್ಟು ಕಾಲ ಮುನಿಸಿಕೊಂಡು ದೂರವಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ನಡುವೆ ಮೈತ್ರಿ ಪುನಃ ಸ್ಥಾಪನೆಯಾಗಿದೆ. ಇದಕ್ಕೆ ಕಾರಣವಾದದ್ದು ಸಿಎಂ ಖುದ್ದಾಗಿ ಹರಿಪ್ರಸಾದ್ ಅವರ ನಿವಾಸಕ್ಕೆ ಭೇಟಿ ನೀಡಿ ಉಪಹಾರ ಸೇವಿಸಿದ ವಿಷಯ.

ಜೆಡಿಎಸ್‌ನಿಂದ ಕಾಂಗ್ರೆಸ್ ಸೇರ್ಪಡೆಗೊಂಡ ಸಂದರ್ಭದಲ್ಲಿ ಬಿ.ಕೆ.ಹರಿಪ್ರಸಾದ್ ಬೆಂಬಲ ಸಿಕ್ಕಿರಲಿಲ್ಲ ಎಂಬ ಕೋಪದಲ್ಲೇ ಎರಡು ದಶಕಗಳ ಕಾಲ ಸಿದ್ದರಾಮಯ್ಯ ಅಂತರ ಕಾಯ್ದುಕೊಂಡಿದ್ದರು. ಈ ನಡುವೆ ಬಹುಮತದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ, ಹರಿಪ್ರಸಾದ್‌ಗೆ ಸಚಿವ ಸ್ಥಾನ ನೀಡದ ಕಾರಣದಿಂದ ಅವರು ಅಹಿಂದ ಸಮಾವೇಶಗಳನ್ನು ಪ್ರತ್ಯೇಕವಾಗಿ ನಡೆಸಿದ ಇತಿಹಾಸವೂ ಇದೆ. ಈ ವೇದಿಕೆಗಳಲ್ಲಿ ಅವರು ಸಿಎಂ ವಿರುದ್ಧ ಪರೋಕ್ಷವಾಗಿ ಟೀಕಿಸುತ್ತಿದ್ದರು.

ಈ ಎಲ್ಲಾ ಬೆಳವಣಿಗೆ ನಡುವೆ ಒಮ್ಮೆ ಸಿಎಂ ಅವರನ್ನು ಹರಿಪ್ರಸಾದ್ ಭೇಟಿ ಮಾಡಿದ್ದರು. ಈಗ ಖುದ್ದಾಗಿ ಹರಿಪ್ರಸಾದ್ ನಿವಾಸಕ್ಕೆ ಉಪಹಾರಕ್ಕೆ ಆಗಮಿಸಿ ಎರಡು ದಶಕದ ಮುನಿಸಿಗೆ ಸಿಎಂ ಬ್ರೇಕ್ ಹಾಕಿದ್ದಾರೆ. ಈ ಮೂಲಕ ಪಕ್ಷದೊಳಗಿನ ತಮ್ಮ ವಿರುದ್ದ ಅಸಮಾಧಾನ ಹೊಂದಿರುವ ನಾಯಕನನ್ನು ವಿಶ್ವಾಸಕ್ಕೆ ಪಡೆಯಲು ಮುಂದಾಗಿದ್ದಾರೆ.

ಈಗ ದಿಢೀರ್‌ ಆಗಿ ಹರಿಪ್ರಸಾದ್‌ ಅವರನ್ನು ಭೇಟಿಯಾಗಿದ್ದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಎರಡೂವರೆ ವರ್ಷದ ಪವರ್ ಶೇರಿಂಗ್ ಟಾಕ್ ನಡುವೆಯೇ ಅಸಮಧಾನಿತರನ್ನ ಒಗ್ಗೂಡಿಸಿ ಮಾಸ್ಟರ್ ಸ್ಟ್ರೋಕ್ ಕೊಡಲು ಸಿಎಂ ಮುಂದಾಗುತ್ತಿದ್ದಾರಾ ಎಂಬ ಚರ್ಚೆಯೂ ಆರಂಭವಾಗಿದೆ.

ಹರಿಪ್ರಸಾದ್, ಹೈಕಮಾಂಡ್ ಮಟ್ಟದಲ್ಲಿ ಪ್ರಭಾವ ಹೊಂದಿರುವ ನಾಯಕರಾಗಿದ್ದು, ಸಿಎಂ ಅವರೊಂದಿಗೆ ಅವರ ಸಂಬಂಧ ಪುನಃ ಬಲವಾದರೆ, ಪಕ್ಷದ ಒಳಗಿನ ಸಾಮರಸ್ಯ ಹೆಚ್ಚುವ ಸಾಧ್ಯತೆ ಇದೆ. ಈ ಭೇಟಿಯು ಕಾಂಗ್ರೆಸ್ ಪಕ್ಷದ ಭವಿಷ್ಯದ ಉತ್ಕರ್ಷಕ್ಕೆ ಅಥವಾ ಒಳಗೆಲಸಕ್ಕೆ ದಾರಿ ಮಾಡಿಕೊಡಬಹುದಾದ ರಾಜಕೀಯ ತಿರುವು ಎನಿಸಿಕೊಳ್ಳುತ್ತಿದೆ.