ಮನೆ ಕಾನೂನು ಟಿಕೆಟ್‌ ದರ ಹೆಚ್ಚಳದ ದೂರು ಅಪರ ಸಾರಿಗೆ ಆಯುಕ್ತ ಸಿ.ಮಲ್ಲಿಕಾರ್ಜುನ ಅವರಿಂದ ಪರಿಶೀಲನೆ

ಟಿಕೆಟ್‌ ದರ ಹೆಚ್ಚಳದ ದೂರು ಅಪರ ಸಾರಿಗೆ ಆಯುಕ್ತ ಸಿ.ಮಲ್ಲಿಕಾರ್ಜುನ ಅವರಿಂದ ಪರಿಶೀಲನೆ

0

ಬೆಂಗಳೂರು : ದೀಪಾವಳಿ ಹಬ್ಬದ ಪ್ರಯುಕ್ತ ಸರದಿ ರಜೆಗಳ ಹಿನ್ನಲೆಯಲ್ಲಿ ಖಾಸಗಿ ಪ್ರಯಾಣಿಕ ವಾಹನಗಳು ಟಿಕೆಟ್‌ ದರ ಹೆಚ್ಚಿಸಿರುವ ಬಗ್ಗೆ ದೂರುಗಳು ಬಂದ ಹಿನ್ನಲೆಯಲ್ಲಿ ಅಪರ ಸಾರಿಗೆ ಆಯುಕ್ತ (ಪ್ರವರ್ತನ) (ದಕ್ಷಿಣ) ರಾದ ಸಿ ಮಲ್ಲಿಕಾರ್ಜುನ ಅವರು ಮೆಜೆಸ್ಟಿಕ್‌ ನಲ್ಲಿ ಪರಿಶೀಲನೆ ನಡೆಸಿದರು.

Join Our Whatsapp Group

ಖಾಸಗಿ ಬಸ್‌ಗಳಲ್ಲಿ ತೆರಳುತ್ತಿದ್ದ ಪ್ರಯಾಣಿಕರಿಂದ ಮಾಹಿತಿ ಪಡೆದ ಅಪರ ಸಾರಿಗೆ ಆಯುಕ್ತರು, ಹೆಚ್ಚಿನ ದರ ವಿಧಿಸುವ ಟ್ರಾವೆಲ್‌ ಗಳ ಬಗ್ಗೆ ದೂರು ನೀಡುವಂತೆ ಕರೆ ನೀಡಿದರು. ಈಗಾಗಲೇ ದಿನಾಂಕ: 25-10-2024ರಂದು ಆಯುಕ್ತರು, ಸಾರಿಗೆ ಮತ್ತು ರಸ್ತೆ ಸುರಕ್ಷತೆ ಇವರ ಅಧ್ಯಕ್ಷತೆಯಲ್ಲಿ ಹಾಗೂ ಅಪರ ಸಾರಿಗೆ ಆಯುಕ್ತರು (ಪ್ರವರ್ತನ) (ದಕ್ಷಿಣ), ಇವರ ಉಪಸ್ಥಿತಿಯಲ್ಲಿ ಖಾಸಗಿ ಬಸ್ ಮಾಲೀಕರು ಹಾಗೂ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಾಮಾನ್ಯ ದರಕ್ಕಿಂತ ಹೆಚ್ಚಿನ ದರವನ್ನು ಪ್ರಯಾಣಿಕರಿಂದ ಪಡೆಯದಂತೆ ನಿರ್ದೇಶನ ನೀಡಲಾಗಿರುತ್ತದೆ. ಆದಾಗ್ಯೂ ದುಪ್ಪಟ್ಟು ಹಣವನ್ನು ಸಂಗ್ರಹಸಿ ಸಾರ್ವಜನಿಕರಿಗೆ ಅನಾನುಕೂಲತೆ ಉಂಟು ಮಾಡುವಂತಹ ವಾಹನಗಳ ಮಾಲೀಕರ ಮೇಲೆ ರಹದಾರಿ (ಪರ್ಮಿಟ್) ಮತ್ತು ನೋಂದಣಿ ಪತ್ರವನ್ನು (ಆರ್.ಸಿ.) ಅಮಾನತ್ತುಪಡಿಸಲು ಹಾಗೂ ಟಿಕೆಟ್ ವಿತರಕರು (ಟಿಕೆಟ್ ಬುಕ್ಕಿಂಗ್ ಆಪ್) ವಿರುದ್ಧ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ಸರಕಾರ ತೀರ್ಮಾನಿಸಿದೆ. ಈ ಹಿನ್ನಲೆಯಲ್ಲಿ ಯಾವುದೇ ಹಿಂಜರಿಕೆ ಇಲ್ಲದೆ ದೂರು ನೀಡಬೇಕು ಎಂದು ತಿಳಿಸಿದರು.

ಇದಲ್ಲದೆ ಪ್ರಯಾಣಿಕ ಸೇವಾ ವಾಹನಗಳಲ್ಲಿ ಅನಧಿಕೃತವಾಗಿ ಸ್ಪೋಟಕ ಸಾಮಾಗ್ರಿಗಳು ಹಾಗೂ ಇತರೆ ಸರಕು ಸಾಗಣೆ ಮಾಡುವುದನ್ನು ನಿಷೇಧಿಸಲಾಗಿದ್ದು, ಇಂತಹ ಪ್ರಕರಣಗಳು ಕಂಡುಬಂದಲ್ಲಿ ವಾಹನ ಮಾಲೀಕರುಗಳ ವಿರುದ್ಧ ಕಾನೂನು ರೀತಿಯಲ್ಲಿ ಪ್ರಕರಣ ದಾಖಲಿಸಲು ಕ್ರಮ ವಹಿಸಲಾಗುವುದೆಂದು ಈ ಮೂಲಕ ಸೂಚಿಸಿದರು.

ಖಾಸಗಿ ಬಸ್ ಸಂಘಗಳು ಸಾಮಾನ್ಯಕ್ಕಿಂತ ಹೆಚ್ಚಿನ ದರವನ್ನು ಪ್ರಯಾಣಿಕರಿಂದ ಸಂಗ್ರಹಿಸುವುದು ಕಂಡುಬಂದಲ್ಲಿ ‌ಸಾರ್ವಜನಿಕರು ಸಾರಿಗೆ ಇಲಾಖೆಯ 9449863429 ಹಾಗೂ 9449863426 ಮೂಲಕ ನಿಯಂತ್ರಣ ಕೊಠಡಿಗೆ ಕಛೇರಿಯ ಸಮಯದಲ್ಲಿ ಕರೆ ಮಾಡಿ ದೂರು ನೀಡಬಹುದು ಅಥವಾ ಸ್ಥಳೀಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಗಳಿಗೆ ದೂರು ದಾಖಲಿಸಬಹುದಾಗಿರುತ್ತದೆ ಎಂದು ತಿಳಿಸಿದರು.