ಚಾಮರಾಜನಗರ: ಚಾಮರಾಜನಗರ ಜಿಲ್ಲೆ ಸಂತಮರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಗ್ಯಾಸ್ ಸಿಲಿಂಡರ್ ಡೆಲಿವರಿ ಕೊಡೋ ನೆಪದಲ್ಲಿ ಮನೆಗೆ ಬಂದ ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಮಹಿಳೆ ವಿರೋಧ ತೋರಿದ್ದಕ್ಕೆ ಚಾಕುವಿನಿಂದ ಇರಿತ ನಡೆಸಿದ ಆರೋಪಿ ಮಹೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಘಟನೆ ಕಳೆದ ಮೇ 21 ರಂದು ಮಧ್ಯಾಹ್ನ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಹೇಶ್ ಗ್ಯಾಸ್ ಏಜೆನ್ಸಿಯ ಡೆಲಿವರಿ ಬಾಯ್ ಮಹೇಶ್ ಎಂಬಾತ ಈ ಕೃತ್ಯ ಎಸಗಿದ್ದಾನೆ. ಮಹಿಳೆ ಮೈಸೂರಿಗೆ ಹೋಗಲು ಸಿದ್ಧವಾಗುತ್ತಿದ್ದ ವೇಳೆ ಮಹೇಶ್ ಗ್ಯಾಸ್ ಸಿಲಿಂಡರ್ ಜೊತೆಗೆ ಮನೆ ಬಾಗಿಲಿಗೆ ಬಂದು “ನಿಮ್ಮ ಸಿಲಿಂಡರ್ ಬುಕಿಂಗ್ ಆಗಿದೆ” ಎಂದು ಹೇಳಿದ್ದ. ಮಹಿಳೆ ತಾವು ಸಿಲಿಂಡರ್ ಬುಕ್ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರೂ, ಅವನು “ಸಿಲಿಂಡರ್ ಖಾಲಿಯಾಗಿದ್ದರೆ ತೆಗೆದುಕೊಳ್ಳಿ” ಎಂದು ಬಲವಂತ ಮಾಡಿದ್ದ. ಮಹಿಳೆ ಆತನ ಮಾತು ನಂಬಿ ₹950 ನೀಡಿ ಸಿಲಿಂಡರ್ ಸ್ವೀಕರಿಸಿದ್ದಳು.
ಅದಾದ ಬಳಿಕ ಮಹೇಶ್ ಅಡುಗೆ ಮನೆಯ ಫೋಟೋ ತೆಗೆಯಬೇಕೆಂದು ಹೇಳಿದ್ದ. ಬೆಳಕು ಬರುತ್ತಿದೆಯೇ ಎಂದು ಪರಿಶೀಲನೆ ಮಾಡಲು ಒಳಗೆ ಬರಬೇಕೆಂದು ಹೇಳಿದ್ದಾನೆ. ಮನೆಯೊಳಗೆ ಬಂದ ಬಳಿಕ, ಅಡುಗೆ ಮನೆಯಲ್ಲೇ ಫೋಟೋ ತೆಗೆದ ಮಹೇಶ್, ಇ-ಕೆವೈಸಿ ಬೇಕು ಎಂಬ ನಾಟಕವಾಡಿ, ನಂತರ ಏಕಾಏಕಿ ಮಹಿಳೆಯ ಮೇಲೆ ಎರಗಿ ಅತ್ಯಾಚಾರಕ್ಕೆ ಯತ್ನಿಸಿದ್ದ.
ಮಹಿಳೆ ಈ ಕೃತ್ಯಕ್ಕೆ ತೀವ್ರ ವಿರೋಧ ತೋರಿದಾಗ, ಆತನ ಬಳಿ ಇದ್ದ ಚಾಕುವಿನಿಂದ ಮಹಿಳೆಯ ಮುಖ ಹಾಗೂ ಎದೆ ಭಾಗಕ್ಕೆ ಇರಿದಿದ್ದಾನೆ. ತಕ್ಷಣ ಮಹಿಳೆ ಕೂಗಿ ಅಳುತ್ತಿದ್ದಾಗ, ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಗಾಯಗೊಂಡ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಸ್ಥಳೀಯ ನಿವಾಸಿಗಳಿಂದ ಮಾಹಿತಿ ಪಡೆದ ಪೊಲೀಸರು ತಕ್ಷಣವೇ ಆರೋಪಿ ಮಹೇಶ್ನನ್ನು ಹಿಡಿದು ಬಂಧನಕ್ಕೊಳಪಡಿಸಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸಂತೆಮರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.














