ಬೆಂಗಳೂರು: 14,000 ಕೋಟಿ ರೂಪಾಯಿ ಮೌಲ್ಯದ ಎಚ್ಎಂಟಿ ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಕ್ಕೆ ಬಳಸಲು ಅನುಮತಿ ಕೋರಿ ಸುಪ್ರೀಂ ಕೋರ್ಟ್ಗೆ ಐಎ ಸಲ್ಲಿಸಿರುವ ಪ್ರಕರಣದ ಹಿನ್ನೆಲೆಯಲ್ಲಿ, ಅರಣ್ಯ ಸಚಿವ ಈಶ್ವರ ಖಂಡ್ರೆ ಘೋಷಣೆ ಮಾಡಿದ್ದಾರೆ. ಅವರು, ಈ ಸಂಬಂಧದಲ್ಲಿ ನಾಲ್ಕು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ತಾವು ಮುಖ್ಯಮಂತ್ರಿಗಳಿಗೆ ಶಿಫಾರಸು ಮಾಡಿರುವುದಾಗಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್.ಎಂ.ಟಿ. ವಶದಲ್ಲಿರುವ ಭೂಮಿ ಅರಣ್ಯೇತರ ಉದ್ದೇಶಕ್ಕೆ ಪರಿವರ್ತನೆ ಆಗಿಲ್ಲ. ಹೀಗಾಗಿ ಸುಪ್ರೀಂಕೋರ್ಟ್ ನೀಡಿರುವ ಹಲವು ತೀರ್ಪು ಮತ್ತು ಅರಣ್ಯ ಸಂರಕ್ಷಣಾ ಕಾಯಿದೆ 1980ರ ಪ್ರಕಾರ ಇಂದಿಗೂ ಇದು ಅರಣ್ಯವೇ ಆಗಿರುತ್ತದೆ. ಆದಾಗ್ಯೂ ಈ ಭೂಮಿ ಪರಭಾರೆ ಆಗಿದೆ, ರಿಯಲ್ ಎಸ್ಟೇಟ್ ಸಂಸ್ಥೆಗಳು ನೂರಾರು ಫ್ಲಾಟ್ ಕಟ್ಟಿದ್ದಾರೆ. ಧಾರಾವಾಹಿ, ಚಲನಚಿತ್ರಗಳ ಚಿತ್ರೀಕರಣ ನಡೆಯುತ್ತಿದೆ. ವಾಣಿಜ್ಯ ಉದ್ದೇಶಕ್ಕೆ ಭೂಮಿ ಬಳಕೆ ಆಗುತ್ತಿದೆ. ಇದಕ್ಕೆ ಹೇಗೆ ಅವಕಾಶ ನೀಡಲಾಗಿದೆ ಎಂಬುದೇ ಪ್ರಶ್ನಾರ್ಥಕವಾಗಿದೆ ಎಂದರು.
ಈ ಪ್ರಕರಣದಲ್ಲಿ ಇಬ್ಬರು ನಿವೃತ್ತ ಹಾಗೂ ಇಬ್ಬರು ಹಾಲಿ ಐಎಫ್ಎಸ್ ಅಧಿಕಾರಿಗಳು ಮಿಶ್ರಿತರಾಗಿದ್ದಾರೆ. ಅವರ ವಿರುದ್ಧ ನೋಟಿಸ್ ನೀಡಿದರೂ 7 ತಿಂಗಳ ಬಳಿಕವೂ ಕ್ರಮ ಕೈಗೊಳ್ಳದ ವಿಚಾರವಾಗಿ ಪತ್ರಕರ್ತರು ಪ್ರಶ್ನಿಸಿದಾಗ, ಈಶ್ವರ ಖಂಡ್ರೆ, “ಇದು 7 ಕೋಟಿ ಕನ್ನಡಿಗರ ಆಸ್ತಿ. ಕೆಲ ಅಧಿಕಾರಿಗಳು ಸಂಪುಟದ ಅನುಮತಿ ಇಲ್ಲದೆ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ನಾನು ಕಠಿಣ ಕ್ರಮದ ಶಿಫಾರಸು ಮಾಡಿದ್ದೇನೆ” ಎಂದು ಸ್ಪಷ್ಟಪಡಿಸಿದರು.
ಅಪರ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಆರ್. ಗೋಕುಲ್ ತಾವು ಬೇಲಿಕೇರಿ ಪ್ರಕರಣದಲ್ಲಿ ಆಡಳಿತ ಪಕ್ಷದ ಶಾಸಕರಿಗೆ ಶಿಕ್ಷೆ ಆಗುವಂತೆ ಮಾಡಿದ ಕಾರಣ ತಮ್ಮನ್ನು ಬಲಿ ಪಶು ಮಾಡಲಾಗುತ್ತಿದೆ ಎಂದು ತಿಳಿಸಿ, ರಕ್ಷಣೆ ಕೋರಿ ಸಿಬಿಐಗೆ ಪತ್ರ ಬರೆದಿದ್ದಾರೆ. ಸರ್ಕಾರ ಅಧಿಕಾರಿಗಳನ್ನು ಬಲಿಪಶು ಮಾಡುತ್ತಿದೆಯೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಖಂಡ್ರೆ, ಇದು ಸರ್ಕಾರದ ವಿರುದ್ಧ ಮಾಡಿರುವ ಸಂಪೂರ್ಣ ಸುಳ್ಳು ಆರೋಪ ಎಂದರು. “ಅವರು ತಮ್ಮ ತಪ್ಪು ಮುಚ್ಚಿಕೊಳ್ಳಲು ಸುಳ್ಳು ಆರೋಪ ಮಾಡಿದ್ದಾರೆ. ಇದು ಬೆದರಿಕೆ ತಂತ್ರವಾಗಿದೆ” ಎಂದರು.
ಈ ಘಟನೆ ಸರ್ಕಾರದ ಗಮನಕ್ಕೆ ಬಂದ ತಕ್ಷಣ, ಸಚಿವ ಸಂಪುಟದಿಂದ ಅನುಮತಿ ಪಡೆದು ಸುಪ್ರೀಂ ಕೋರ್ಟ್ಗೆ ಐಎ ಹಿಂಪಡೆಯಲು ಅರ್ಜಿ ಸಲ್ಲಿಸಲಾಗಿದೆ. “ಇದು ಜನರ ಅರಣ್ಯ, ಜನರ ಹಕ್ಕು. ಅದನ್ನು ಕಾಪಾಡುವ ಹೊಣೆ ನಮ್ಮದು” ಎಂದು ಖಂಡ್ರೆ ಹೇಳಿದರು.
ಈಶ್ವರ ಖಂಡ್ರೆ ಅವರು ಮುಂದಿನ ಯೋಜನೆಯೂ ಪ್ರಕಟಿಸಿದ್ದಾರೆ: ಎಚ್ಎಂಟಿ ಭೂಮಿಯಲ್ಲಿ ಉತ್ತರ ಬೆಂಗಳೂರಿನಲ್ಲಿ ಬೃಹತ್ ಉದ್ಯಾನ ನಿರ್ಮಿಸಲು ಸರ್ಕಾರ ಉದ್ದೇಶಿಸಿದೆ. “ಇದು ಮುಂದಿನ ಪೀಳಿಗೆಗೆ ‘ಲಂಗ್ಸ್ ಸ್ಪೇಸ್’ (ಶ್ವಾಸತಾಣ) ಆಗಿರಲಿದೆ” ಎಂದು ಅವರು ಹೇಳಿದರು.















