ಬೆಂಗಳೂರು: ಕರ್ನಾಟಕದಲ್ಲಿ ಭ್ರಷ್ಟಾಚಾರ ವಿರುದ್ಧದ ಹೋರಾಟ ಮತ್ತೊಂದು ಹೆಜ್ಜೆ ಮುಂದೆ ಬಿದ್ದಿದ್ದು, ಬೆಳ್ಳಂಬೆಳಿಗ್ಗೆ ನಡೆದ ಅನಿರೀಕ್ಷಿತ ದಾಳಿಯಿಂದ ಹಲವಾರು ಭ್ರಷ್ಟ ಅಧಿಕಾರಿಗಳಿಗೆ ಬಿಗ್ ಶಾಕ್ ನೀಡಲಾಗಿದೆ. ಗದಗ, ಬಳ್ಳಾರಿ, ಹಾವೇರಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಸಮಾಲೋಚಿತ ರೀತಿಯಲ್ಲಿ ದಾಳಿ ನಡೆಸಿದ್ದು, ಮಹತ್ವದ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಬಗ್ಗೆ ಬಂದಿರುವ ಆರೋಪದ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಗದಗ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ಗಂಗಾಧರ್ ಶಿರೋಳ ಅವರ ನಿವಾಸ, ಕಚೇರಿ ಹಾಗೂ ಕುಟುಂಬದ ಸದಸ್ಯರ ಮನೆಗಳು ಸೇರಿ 6 ಕಡೆಗಳಲ್ಲಿ ದಾಳಿ ನಡೆಯುತ್ತಿದೆ.
ಲೋಕಾಯುಕ್ತ ಎಸ್.ಪಿ. ಹನಮಂತರಾಯ ಅವರ ನೇತೃತ್ವದಲ್ಲಿ ಈ ದಾಳಿಗಳು ನಡೆಯುತ್ತಿದ್ದು, ಗಂಗಾಧರ್ ಶಿರೋಳ ಅವರ ಹುಡ್ಕೋ ಕಾಲೋನಿಯಲ್ಲಿರುವ ನಿವಾಸ, ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ, ಹಾವೇರಿ ಜಿಲ್ಲೆಯಲ್ಲಿ ಅವರ ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆದಿದೆ. ಲೋಕಾಯುಕ್ತದ ತಂಡವು ಸ್ಥಳದಲ್ಲಿಯೇ ದಾಖಲೆ ಪರಿಶೀಲನೆ, ಲೆಕ್ಕಪತ್ರಗಳು ಹಾಗೂ ಆಸ್ತಿ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದೆ.














