ಬೆಂಗಳೂರು: ಆಟೋ ಚಾಲಕನಿಗೆ ಹಿಂದಿ ಮಹಿಳೆ ಚಪ್ಪಲಿಯಿಂದ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕ್ರೋಶ ಹೆಚ್ಚಾದ ಬೆನ್ನಲ್ಲೇ ಬಿಹಾರ ಮೂಲದ ಮಹಿಳೆ ಹಾಗೂ ಆಕೆಯ ಪತಿ ಆಟೋ ಚಾಲಕನ ಕಾಲಿಗೆ ಬಿದ್ದು ಕ್ಷಮೆಯಾಚಿಸಿದ್ದಾರೆ. ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಘಟನೆಯು ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಿಹಾರ ಮೂಲದ ಪನ್ಸೂರಿ ಎಂಬ ಮಹಿಳೆ, ತನ್ನ ಪತಿಯೊಂದಿಗೆ ಬೈಕ್ನಲ್ಲಿ ಹೋಗುತ್ತಿದ್ದ ವೇಳೆ, ಆಟೋ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಎಂಬ ಆರೋಪವಾಗಿದೆ. ಈ ಸಂಬಂಧ ಯುವತಿ ಮತ್ತು ಆಟೋ ಚಾಲಕ ಲೋಕೇಶ್ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿ, ಚಾಲಕನಿಗೆ ಯುವತಿ ಚಪ್ಪಲಿಯಿಂದ ಹೊಡೆದಿದ್ದಾಳೆ. ಈ ಸಂಬಂಧ ಚಾಲಕ ಲೋಕೇಶ್ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಯುವತಿಯನ್ನೂ ಮತ್ತು ಆಕೆಯ ಪತಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ತನಿಖೆ ವೇಳೆ ಮಹಿಳೆ, ಆಟೋ ಚಾಲಕನ ಮೇಲೆ ಹಲ್ಲೆ ಮಾಡಿರುವುದನ್ನು ಮಹಿಳೆ ಒಪ್ಪಿಕೊಂಡಿದ್ದಾಳೆ. ನಾವು ಹೋಗುವಾಗ ಏನೋ ಘಟನೆ ಆಯ್ತು. ಬೇಕು ಬೇಕು ಅಂತ ಮಾಡಿದ್ದಲ್ಲ. ನಾನು ಕ್ಷಮೆ ಕೇಳುತ್ತೇನೆ. ನಾನು ಗರ್ಭಿಣಿ. ಗರ್ಭಪಾತ ಆಗುವ ಭಯದಲ್ಲಿ ಹೀಗೆ ಮಾತನಾಡಿದೆ. ಬೆಂಗಳೂರು ಅಂದರೆ ತುಂಬಾ ಇಷ್ಟ. ಬೆಂಗಳೂರು, ಬೆಂಗಳೂರು ಸಂಸ್ಕೃತಿಯನ್ನು ತುಂಬಾ ಗೌರವಿಸುತ್ತೇವೆ ಹಾಗೂ ಪ್ರೀತಿಸುತ್ತೇವೆ ಎಂದು ಮಹಿಳೆ ಹೇಳಿದ್ದಾಳೆ.
ನಂತರ ಪೋಲೀಸ್ ರ ಸಮ್ಮುಖದಲ್ಲೇ ಬಿಹಾರ ಮೂಲದ ಈ ದಂಪತಿ ಆಟೋ ಚಾಲಕ ಲೋಕೇಶ್ ಅವರ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾರೆ. ಅಲ್ಲದೇ, “ಈಗಾಗಲೇ ನಾವು ಮಾಡಿದ ತಪ್ಪಿಗೆ ಎಲ್ಲಾ ಕನ್ನಡಿಗರಲ್ಲಿ ಕ್ಷಮೆ ಕೇಳುತ್ತೇವೆ, ಮುಂದೇನು ಈ ರೀತಿಯ ವರ್ತನೆ ಮಾಡುವುದಿಲ್ಲ” ಎಂದು ದೃಢವಾಗಿ ಹೇಳಿದ್ದಾರೆ.
ಈ ಕ್ಷಮೆಯ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.














