ಬೆಂಗಳೂರು: ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 524 ಮೀಟರ್‌ಗಳಿಗೆ ಹೆಚ್ಚಿಸಲು ಕರ್ನಾಟಕ ಸರ್ಕಾರ ಮುಂದಾಗಿದ್ದರೆ, ಈಗ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ವಿಚಾರ ರಾಜ್ಯ ರಾಜಕಾರಣ ಹಾಗೂ ಜಲವಿವಾದಗಳ ತೀವ್ರತೆ ಹೆಚ್ಚಿಸಿದೆ.
ವಿಧಾನಸೌಧದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಮೇ 9ರಂದು ಮಹಾರಾಷ್ಟ್ರ ಸಿಎಂ ಫಡ್ನವೀಸ್ ಅವರು ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಆಲಮಟ್ಟಿ ಎತ್ತರ ಹೆಚ್ಚಳಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದು ನಮಗೆ ಅಚ್ಚರಿ ತಂದಿದೆ ಎಂದು ಹೇಳಿದರು.
ನ್ಯಾಯಧಿಕರಣದ ತೀರ್ಪು ಬಂದಾಗ ಸುಮ್ಮನಿದ್ದ ಮಹಾರಾಷ್ಟ್ರ ಸಿಎಂ ಈಗ ಹಠಾತ್ತನೇ ಕರ್ನಾಟಕದ ಸಿಎಂ ಅವರಿಗೆ ಪತ್ರ ಬರೆದು ಆಕ್ಷೇಪ ವ್ಯಕ್ತಪಡಿಸಿರುವುದು ತೀವ್ರ ಆಶ್ಚರ್ಯ ತಂದಿದೆ. ಹೀಗಾಗಿ ಯೋಜನೆ ಜಾರಿ ಮಾಡಿ, ರಾಜ್ಯ ಹಾಗೂ ರೈತರ ಹಿತ ಕಾಯಲು ಎಲ್ಲಾ ಸಂಸದರು, ಕೇಂದ್ರ ಸಚಿವರು ಸಹಕರಿಸಬೇಕು ಎಂದು ಕೈಮುಗಿದು ಕೇಳಿಕೊಳ್ಳುತ್ತೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮನವಿ ಮಾಡಿದರು.
ಡಿಸಿಎಂ ಡಿಕೆ ಶಿವಕುಮಾರ್ ಮಾತುಗಳ ಪ್ರಕಾರ, ಕೃಷ್ಣಾ ನ್ಯಾಯಾಧಿಕರಣದ ತೀರ್ಪಿನಂತೆ ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 524 ಮೀಟರ್‌ಗಳಿಗೆ ಹೆಚ್ಚಿಸುವುದು ಕರ್ನಾಟಕದ ಕಾನೂನುಬದ್ಧ ಹಕ್ಕು. ಮಹಾರಾಷ್ಟ್ರ ಈ ತೀರ್ಪಿಗೆ ಸಹಮತಿ ಸೂಚಿಸಿತ್ತು. ಈಗ ಈ ಯೋಜನೆ ಅನುಷ್ಠಾನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವುದು ದುರದೃಷ್ಟಕರವಾಗಿದೆ ಎಂದು ತಿಳಿಸಿದರು.
“ನಾವು ರಾಜಕೀಯ ಮಾಡುವುದಿಲ್ಲ. ನಮ್ಮ ಹಕ್ಕು ಪಡೆಯುವುದೆ ನಮ್ಮ ಧ್ಯೇಯ,” ಎಂದು ಅವರು ಹೇಳಿದ್ದಾರೆ.
ಈ ಕುರಿತು ಪ್ರಧಾನಿ ನರೇಂದ್ರ ಮೋದಿ, ಜಲಶಕ್ತಿ ಸಚಿವ ಹಾಗೂ ಕೇಂದ್ರದ ಇತರ ಸಚಿವರನ್ನು ಭೇಟಿ ಮಾಡಿ, ತಮ್ಮ ಮನವಿ ಸಲ್ಲಿಸುತ್ತೇವೆ ಎಂದು ಡಿಕೆಶಿ ಹೇಳಿದ್ದಾರೆ. ಕೇಂದ್ರ ಜಲಶಕ್ತಿ ಸಚಿವಾಲಯದ ಸಚಿವರಾದ ಸೋಮಣ್ಣ ಅವರಿಗೆ ಈ ವಿಷಯದ ಗಂಭೀರತೆಯನ್ನು ಮನವರಿಕೆ ಮಾಡಲಾಗುವುದು. ಆಲಮಟ್ಟಿ ಯೋಜನೆ ನಮ್ಮ ರಾಜ್ಯದ ಹಿತ. ನಮಗೆ ನೆರೆ ರಾಜ್ಯಗಳ ಜೊತೆ ತಿಕ್ಕಾಟ ಇಷ್ಟವಿಲ್ಲ. ಈ ಯೋಜನೆ ತಡವಾಗುತ್ತಿರುವುದರಿಂದ ಯೋಜನೆ ವೆಚ್ಚ ವಿಪರೀತ ಏರಿಕೆಯಾಗುತ್ತಿದೆ. ಯೋಜನೆ ಭೂಸ್ವಾಧೀನಕ್ಕೆ 1 ಲಕ್ಷ ಕೋಟಿ ರೂ. ಬೇಕಾಗಿದೆ. ನಮ್ಮ ಪಾಲಿನ ನೀರು ಬಳಸಲು ಈ ಯೋಜನೆ ಮುಖ್ಯ ಎಂದು ಹೇಳಿದರು.
ನಮ್ಮ ರೈತರ ಹಿತಕಾಯಲು ನೀವು ಯಾವಾಗ ಎಲ್ಲಿಗೆ ಕರೆಯುತ್ತೀರೋ ಅಲ್ಲಿಗೆ ಬರಲು ನಮ್ಮ ಸರ್ಕಾರ ಸಿದ್ಧವಿದೆ. ಮಹಾರಾಷ್ಟ್ರ ಸಿಎಂ ಹಾಗೂ ಅದಕ್ಕೆ ನಮ್ಮ ಸಿಎಂ ಬರೆಯುವ ಪತ್ರವನ್ನು ಎಲ್ಲಾ ಸಂಸದರಿಗೆ ರವಾನಿಸುತ್ತೇವೆ. ನ್ಯಾಯಾಧಿಕರಣ ತೀರ್ಪಿನ ಅನ್ವಯ ನಮ್ಮ ಪಾಲಿನ ನೀರನ್ನು ಪಡೆಯಲು ಆಲಮಟ್ಟಿ ಅಣೆಕಟ್ಟನ್ನು 524 ಮೀ.ಗೆ ಎತ್ತರಿಸುವ ಯೋಜನೆ ವಿಚಾರವಾಗಿ ನಾನು ಹಾಗೂ ಮುಖ್ಯಮಂತ್ರಿಗಳು ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದೆವು. ಈ ಬಗ್ಗೆ ಸಭೆ ಕರೆದು ಚರ್ಚೆ ಮಾಡಿ, ಅಧಿಸೂಚನೆ ಹೊರಡಿಸಿ ಎಂದು ಮನವಿ ಮಾಡಿದ್ದೆವು ಎಂದರು.
ನಮ್ಮ ಪಾಲಿನ ಹಕ್ಕಿನ ನೀರನ್ನು ಬಳಸಲು ಯೋಜನೆ ಜಾರಿಯಾಗುವುದಷ್ಟೇ ನಮಗೆ ಮುಖ್ಯ. ನಾನು ಈ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ನಿಮ್ಮ ಪಾಲಿನ ನೀರನ್ನು ನೀವು ಪಡೆದು, ನಮ್ಮ ಪಾಲಿನ ಹಕ್ಕನ್ನು ಪಡೆಯಲು ನಮಗೆ ಬಿಡಿ ಎಂದು ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ಇದಕ್ಕೆ ಸಂಬಂಧಿಸಿದ ಎಲ್ಲರಿಗೂ ಮನವಿ ಮಾಡುತ್ತೇನೆ ಎಂದು ತಿಳಿಸಿದರು.
“ಮಹಾರಾಷ್ಟ್ರದ ಆಕ್ಷೇಪಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ. ನ್ಯಾಯಾಧಿಕರಣವು ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ತೀರ್ಪು ನೀಡಿದೆ. ಈಗ ಕೇಂದ್ರ ಸರ್ಕಾರದ ಅಧಿಸೂಚನೆ ಮಾತ್ರ ಬಾಕಿ ಇದೆ” ಎಂದರು.














