ಬೆಂಗಳೂರು: ಕನ್ನಡ-ತಮಿಳು ಭಾಷಾ ವಿವಾದದ ಬೆನ್ನಲ್ಲೇ, ಕಮಲ್ ಹಾಸನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಥಗ್ ಲೈಫ್ ನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡದಿರಲು ತೀರ್ಮಾನಿಸಲಾಗಿದೆ. ತಮಿಳು ಭಾಷೆಗೆ ಆದ್ಯತೆ ನೀಡಿದ ವಿವಾದಾತ್ಮಕ ಹೇಳಿಕೆ ನೀಡಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿರುವ ಹಿರಿಯ ನಟ ಕಮಲ್ ಹಾಸನ್, ತಾವು ಅಭಿನಯಿಸಿದ ಚಿತ್ರವನ್ನು ರಾಜ್ಯದಲ್ಲಿ ಬಿಡುಗಡೆ ಮಾಡುವ ಬಗ್ಗೆ ಹೈಕೋರ್ಟ್ ಗೆ ಮೊರೆ ಹೋಗಿದ್ದರು. ಆದರೆ, ನ್ಯಾಯಾಲಯದ ತೀಕ್ಷ್ಣ ಟೀಕೆಯನ್ನು ಎದುರಿಸಿದ ನಂತರ, ತಾವು ಚಿತ್ರ ಬಿಡುಗಡೆಗೆ ಮುಂದಾಗದಿರುವುದಾಗಿ ಅವರ ಪರ ವಕೀಲರು ಇಂದು ಹೈಕೋರ್ಟ್‌ಗೆ ಸ್ಪಷ್ಟಪಡಿಸಿದರು.
ಇತ್ತೀಚೆಗಷ್ಟೆ ಕಮಲ್ ಹಾಸನ್ ಅವರು “ಕನ್ನಡ ತಮಿಳಿನಿಂದ ಹುಟ್ಟಿದೆ” ಎಂಬ ಹೇಳಿಕೆ ನೀಡಿ ಭಾಷಾ ನಿಷ್ಠೆ ಕುರಿತಂತೆ ವಿವಾದವನ್ನು ಹುಟ್ಟುಹಾಕಿದ್ದರು. ಈ ಹೇಳಿಕೆ ರಾಜ್ಯದಾದ್ಯಂತ ಕಠಿಣ ವಿರೋಧಕ್ಕೆ ಕಾರಣವಾಯಿತು. ಕನ್ನಡ ಅಭಿಮಾನಿ ಸಂಘಟನೆಗಳು ಹಾಗೂ ಜನತೆ ನಟನಿಗೆ ಕ್ಷಮೆ ಕೇಳುವಂತೆ ಆಗ್ರಹಿಸಿದ್ದರು.
ಈ ಹಿನ್ನೆಲೆಯಲ್ಲಿ, ಥಗ್ ಲೈಫ್ ಚಿತ್ರವನ್ನು ರಾಜ್ಯದಲ್ಲಿ ಬಿಡುಗಡೆ ಮಾಡಬೇಕೆಂಬ ಕೋರಿಕೆಯೊಂದಿಗೆ ಕಮಲ್ ಹಾಸನ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ನ್ಯಾಯಾಧೀಶರು, ಅವರನ್ನು ತರಾಟೆಗೆ ತೆಗೆದುಕೊಂಡು ಮೊದಲು ಕನ್ನಡಿಗರ ಕ್ಷಮೆ ಕೇಳುವಂತೆ ಹೇಳಿತ್ತು. “ನೀವು ಇತಿಹಾಸಜ್ಞರಾ? ಭಾಷೆಯ ಮೂಲದ ಬಗ್ಗೆ ನೀವು ಹೇಳಿಕೆ ನೀಡುವುದಕ್ಕೆ” ಎಂದು ನ್ಯಾಯಾಲಯ ಖಡಕ್ಕಾಗಿ ಪ್ರಶ್ನಿಸಿತು.
ಈ ಎಲ್ಲ ಬೆಳವಣಿಗೆಯ ನಡುವೆಯೇ, ಕಮಲ್ ಹಾಸನ್ ಪರವಾಗಿ ವಕೀಲರು ಹಾಜರಾಗಿ, “ಥಗ್ ಲೈಫ್ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡುವುದಿಲ್ಲ” ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಕನ್ನಡಿಗರು ಈ ನಿರ್ಧಾರವನ್ನು ಸ್ವಾಗತಿಸಿದ್ದು, ತಮ್ಮ ಭಾಷಾ ಗೌರವಕ್ಕೆ ನೀಡಿದ ಪ್ರತಿಕ್ರಿಯೆಯಾಗಿ ಪರಿಗಣಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ನಟನ ವಿರೋಧದ ಅಭಿಯಾನ ಮುಂದುವರಿದರೂ, ಚಿತ್ರ ಬಿಡುಗಡೆ ತಡೆಯುವ ನಿರ್ಧಾರದಿಂದಾಗಿ ಗಂಭೀರ ಉದ್ವಿಗ್ನತೆ ತಪ್ಪಿದಂತಾಗಿದೆ.














