ಬೆಂಗಳೂರು: ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯಾಗಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಸಂಸ್ಕೃತ ವಿಷಯದಲ್ಲಿ 125ಕ್ಕೆ 125 ಅಂಕಗಳನ್ನು ಪಡೆದು ಮಹತ್ವದ ಸಾಧನೆ ಮಾಡಿದ ಜೈನಾಬ್ ಬೇಗಂ ಎಂಬ ವಿದ್ಯಾರ್ಥಿನಿಗೆ ರಾಜ್ಯದ ಸಚಿವ ಜಮೀರ್ ಅಹ್ಮದ್ ಖಾನ್ ವೈಯಕ್ತಿಕವಾಗಿ ಗೌರವಿಸಿ, ದ್ವಿಚಕ್ರ ವಾಹನ ಹಾಗೂ 1 ಲಕ್ಷ ರೂಪಾಯಿ ನಗದು ಪುರಸ್ಕಾರವಾಗಿ ನೀಡಿದ್ದಾರೆ.
ಈ ಸನ್ಮಾನ ಸಮಾರಂಭವು ಚಾಮರಾಜನಗರದಲ್ಲಿ ಇಂದು ನಡೆಯಿತು. ವಿದ್ಯಾರ್ಥಿನಿ ಜೈನಾಬ್ ಬೇಗಂ ತನ್ನ ಶ್ರಮದಿಂದ ಸಂಸ್ಕೃತ ವಿಷಯದಲ್ಲಿ ಶತಪ್ರತಿಶತ ಅಂಕ ಪಡೆದು, ಭಾಷಾ ಸಾಂಸ್ಕೃತಿಕ ಹಿನ್ನಲೆಯಲ್ಲಿ ಇತರರಿಗೆ ಪ್ರೇರಣೆಯಾದ ಘಟನೆ ಇದಾಗಿದೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್ ಅವರು, “ಇದು ಅತ್ಯಂತ ಹೆಮ್ಮೆಯ ಸಂಗತಿ. ಮುಂದೆ ಇನ್ನಷ್ಟು ಸಾಧನೆಯನ್ನು ಮಾಡಲಿ. ಉತ್ತಮ ಅಂಕ ಪಡೆದು ಪೋಷಕರಿಗೆ, ಸಮುದಾಯಕ್ಕೆ ಕೀರ್ತಿಯನ್ನು ತರಲಿ ಅಂತ ಹಾರೈಸಿದರು.
ಇದೇ ಕಾರ್ಯಕ್ರಮದಲ್ಲಿ ಮತ್ತೊಬ್ಬ ಪ್ರತಿಭಾನ್ವಿತ ವಿದ್ಯಾರ್ಥಿನಿ ಶಗುಫ್ತಾ ಅಂಜುಮ್, ಚಾಮರಾಜಪೇಟೆಯ ನಿವಾಸಿಯಾಗಿರುವ ಅವರು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625ರಲ್ಲಿ 625 ಅಂಕ ಪಡೆದು ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಶಗುಫ್ತಾ ಅವರಿಗೂ ಸಚಿವರು ಅವರು ವೈಯಕ್ತಿಕವಾಗಿ ಬೈಕ್ ಹಾಗೂ 1 ಲಕ್ಷ ರೂ. ನಗದು ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಮೀರ್ ಅಹ್ಮದ್, “ಇವರಂತಹ ಪ್ರತಿಭೆಗಳು ಸಮುದಾಯಕ್ಕೂ, ಸಮಾಜಕ್ಕೂ ಹೆಮ್ಮೆ ತರುವವರು. ಈ ಸಾಧನೆಯ ಮೂಲಕ ಇವರು ಇತರ ಮಕ್ಕಳಿಗೆ ಮಾದರಿಯಾಗಬೇಕು. ಯುವಕರಿಗೆ ಶಿಕ್ಷಣದ ಹಾದಿಯಲ್ಲಿ ಮುಂದುವರಿಯಲು ಹಾಗೂ ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ಸರ್ಕಾರದ ಬೆಂಬಲ ಸದಾ ಇರುತ್ತದೆ” ಎಂದರು.














