ಮನೆ ರಾಜ್ಯ ಆರ್‌ಸಿಬಿ ವಿಜಯದ ಸಂಭ್ರಮದಲ್ಲಿ ಮದ್ಯದ ಹೊಳೆ: ಒಂದೇ ದಿನದಲ್ಲಿ 157 ಕೋಟಿ ರೂ. ಮದ್ಯ ಮಾರಾಟ...

ಆರ್‌ಸಿಬಿ ವಿಜಯದ ಸಂಭ್ರಮದಲ್ಲಿ ಮದ್ಯದ ಹೊಳೆ: ಒಂದೇ ದಿನದಲ್ಲಿ 157 ಕೋಟಿ ರೂ. ಮದ್ಯ ಮಾರಾಟ : ದಾಖಲೆ ಬರೆದ ಕರ್ನಾಟಕ!

0

ಬೆಂಗಳೂರು: ಐಪಿಎಲ್ 2025ರ ಫೈನಲ್‌ ಪಂದ್ಯದಲ್ಲಿ ಪಂಜಾಬ್‌ ವಿರುದ್ಧ ಭರ್ಜರಿ ಗೆಲುವು ದಾಖಲಿಸಿ ಮೊದಲ ಬಾರಿಗೆ ಐಪಿಎಲ್ ಟ್ರೋಫಿ ಎತ್ತಿ ಹಿಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ವಿಜಯೋತ್ಸವ ರಾಜ್ಯದಾದ್ಯಂತ ಭಾರೀ ಸಂಭ್ರಮ ಸೃಷ್ಟಿಸಿದೆ. ಈ ಸಂಭ್ರಮದಲ್ಲಿ ಮದ್ಯ ಮಾರಾಟದ ಮೇಲೆ ಅಪಾರ ಪ್ರಭಾವ ಬೀರಿದ್ದು, ಜೂನ್ 3ರಂದು ಕರ್ನಾಟಕ ರಾಜ್ಯದಲ್ಲಿ ದಾಖಲೆ ಪ್ರಮಾಣದ ಮದ್ಯ ಮಾರಾಟವಾಗಿದೆ.

ಮಂಗಳವಾರ ನಡೆದ ಫೈನಲ್‌ ದಿನ, ರಾಜ್ಯದ ಎಲ್ಲಾ ನಗರಗಳಲ್ಲಿ ಮದ್ಯದ ಅಂಗಡಿಗಳ ಮುಂದೆ ಅಭಿಮಾನಿಗಳ ಸಾಲು ಕಾಣಿಸಿಕೊಂಡಿತು. ಒಟ್ಟಾರೆ 1.48 ಲಕ್ಷ ಬಾಟಲ್ ಬಿಯರ್ ಬಾಕ್ಸ್‌ಗಳು ಮಾರಾಟವಾಗಿದ್ದು, ಕೇವಲ ಬಿಯರ್ ಮಾರಾಟದಿಂದಲೇ 30.66 ಕೋಟಿ ರೂ. ಆದಾಯ ಬಂದಿದೆ. ಇದೇ ಜೂನ್ 3 ರಂದು ಕಳೆದ ವರ್ಷ ಕೇವಲ 0.36 ಲಕ್ಷ ಬಾಕ್ಸ್‌ಗಳು ಮಾರಾಟವಾಗಿ 6.29 ಕೋಟಿ ರೂ. ಆದಾಯ ದೊರಕಿತ್ತು. ಹೀಗಾಗಿ, ಈ ವರ್ಷ ಬಿಯರ್ ಮಾರಾಟದಲ್ಲಿ ಒಂದೇ ದಿನದಲ್ಲಿ 24.37 ಕೋಟಿ ರೂ.ಗಳಷ್ಟು ಹೆಚ್ಚಳವಾಗಿದೆ.

ಬಿಯರ್ ಮಾತ್ರವಲ್ಲ, ಇತರ ಆಲ್ಕೋಹಾಲ್‌ಯುಕ್ತ ಮದ್ಯಗಳ ಮಾರಾಟವೂ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ. ಒಟ್ಟಾರೆ 1.28 ಲಕ್ಷ ಬಾಕ್ಸ್‌ಗಳ ಮದ್ಯ ಮಾರಾಟವಾಗಿ ರಾಜ್ಯವು 127.88 ಕೋಟಿ ರೂ. ಗಳಿಸಿದೆ. ಹಿಂದಿನ ವರ್ಷ ಇದೇ ದಿನ ಈ ಸೆಗ್ಮೆಂಟಿನಿಂದ ಕೇವಲ 19.41 ಕೋಟಿ ರೂ. ಬಂದಿತ್ತು. ಹೀಗಾಗಿ ಈ ವರ್ಷ ಮದ್ಯ ಮಾರಾಟದಿಂದ ಒಟ್ಟಾರೆ 157.94 ಕೋಟಿ ರೂ. ಆದಾಯವಾಗಿದ್ದು, ಹಿಂದಿನ ವರ್ಷದ ಜೂನ್‌ 3 ರಂದು ಒಟ್ಟು 25 ಕೋಟಿ ರೂ. ಮಾತ್ರ ಬಂದಿತ್ತು. 132.24 ಕೋಟಿ ರೂ.ಗಳ ಹೆಚ್ಚಳವಾಗಿದೆ.

ಆರ್‌ಸಿಬಿ ಅಭಿಮಾನಿಗಳು ಈ ಜಯವನ್ನು ಜೀವನದ ಮಹತ್ವದ ಕ್ಷಣವೆಂದು ಭಾವಿಸಿದ್ದು, “ಈ ಸಲ ಕಪ್ ನಮ್ದು”, “ಆರ್‌ಸಿಬಿ! ಆರ್‌ಸಿಬಿ!” ಎಂಬ ಘೋಷಣೆಗಳೊಂದಿಗೆ ಬೀದಿಗಳಲ್ಲಿ ಸಂಭ್ರಮಿಸುತ್ತಿದ್ದರು. ವಿಜಯದ ನಶೆಯಲ್ಲಿ ತೇಲಿದ ಅಭಿಮಾನಿಗಳು ಮದ್ಯದ ಅಂಗಡಿಗಳಲ್ಲಿ ರಾತ್ರಿವರೆಗೆ ಸಾಲುಗಳು ಕಂಡು ಬಂದವು. ವಿವಿಧ ಪಬ್‌ಗಳು, ಲೌಂಜ್‌ಗಳು, ಹೋಟೆಲ್‌ಗಳಲ್ಲಿ ವಿಜಯೋತ್ಸವ ಪಾರ್ಟಿಗಳು ನಡೆದಿದ್ದು, ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಮಂಗಳೂರು ಸೇರಿದಂತೆ ಎಲ್ಲಾ ಪ್ರಮುಖ ನಗರಗಳಲ್ಲಿ ಮದ್ಯದ ಗ್ರಾಹಕರ ಸಂಖ್ಯೆ ಗಣನೀಯವಾಗಿ ಹೆಚ್ಚಿತ್ತು.

ಆರ್‌ಸಿಬಿ ತಂಡ ಇಂದು ಬೆಂಗಳೂರಿಗೆ ಆಗಮಿಸಿದ್ದು, ವಿಧಾನಸೌಧದಲ್ಲಿ ಸರ್ಕಾರಿ ಅಭಿನಂದನಾ ಸಮಾರಂಭ ನಡೆಯುತ್ತಿದೆ. ನಾಯಕ ರಜತ್ ಪಾಟಿದಾರ್ ನೇತೃತ್ವದ ಈ ತಂಡವು ಐಪಿಎಲ್‌ ಆರಂಭವಾಗಿ 18 ವರ್ಷಗಳ ಬಳಿಕ ಮೊದಲ ಬಾರಿಗೆ ಟ್ರೋಫಿ ಗೆದ್ದು, ಕೋಟಿ ಕೋಟಿ ಅಭಿಮಾನಿಗಳ ಕನಸು ನನಸು ಮಾಡಿದೆ.