ಬೀದರ್: ಬಕ್ರೀದ್ ಹಬ್ಬದ ಹಿನ್ನೆಲೆ ಅಂಗವಾಗಿ ಬಲಿಗೆ ಸಿದ್ಧವಾಗಿದ್ದ 40ಕ್ಕೂ ಹೆಚ್ಚು ಗೋವುಗಳನ್ನು ಬಿಜೆಪಿ ಶಾಸಕ ಶರಣು ಸಲಗರ್ ರಕ್ಷಿಸಿರುವ ಘಟನೆ ಬಸವಕಲ್ಯಾಣ ಪಟ್ಟಣದಲ್ಲಿ ನಡೆದಿದೆ.
ಶರಣು ಸಲಗರ್ ಅವರಿಗೆ ಮಹಿಬೂಬ್ ಗಲ್ಲಿಯಲ್ಲಿ ಅಕ್ರಮವಾಗಿ ಗೋವುಗಳನ್ನು ಸಂಗ್ರಹಿಸಿ, ಬಲಿಗೆ ಸಿದ್ಧಪಡಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಲಭಿಸಿದ್ದು, ಆಧಾರದ ಮೇರೆಗೆ ಅವರು ಇಂದು ಬೆಳಗ್ಗೆ ಶೆಡ್ ಮೇಲೆ ದಾಳಿ ನಡೆಸಿದರು. ದಾಳಿಯ ವೇಳೆ ಗೋಮಾಂಸ ಕೂಡ ಪತ್ತೆಯಾಗಿದೆ ಎಂದು ವರದಿಯಾಗಿದೆ.
ದಾಳಿಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಶರಣು ಸಲಗರ್, “ನಾನು ಬದುಕಿರುವವರೆಗೂ ಗೋವುಗಳ ಬಲಿ ನಡೆಯಲು ಬಿಡಲ್ಲ. ಯಾರಿಗೂ ಹೆದರಿ ಕೆಲಸ ಮಾಡಬೇಡಿ. ಧಮ್ ಇದ್ದರೆ ಇಲ್ಲಿ ಬನ್ನಿ” ಎಂದು ಕಾಂಗ್ರೆಸ್ ಮುಖಂಡ ವಿಜಯ್ ಸಿಂಗ್‌ಗೆ ಸಲಗರ್ ಸವಾಲು ಎಸೆದಿದ್ದಾರೆ. “ನಿಮ್ಮ ಕುಮ್ಮಕ್ಕಿನಿಂದಲೇ ಗೋವುಗಳ ಹತ್ಯೆ ನಡೆಯುತ್ತಿದೆ. ಧೈರ್ಯವಿದ್ದರೆ ಎದುರಿಗೆ ಬನ್ನಿ” ಎಂದು ಬಿಜೆಪಿ ಶಾಸಕ ಗರಂ ಆಗಿದ್ದಾರೆ.
ಈ ಘಟನೆಯ ನಂತರ ಸ್ಥಳೀಯ ಪ್ರದೇಶದಲ್ಲಿ ಕೆಲ ಕಾಲ ಚರ್ಚೆಗಳು ನಡೆದರೂ, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿದ್ದಾರೆ.
ಶರಣು ಸಲಗರ್ ಅವರ ಈ ನಡೆ ಗೋಸಂರಕ್ಷಣಾ ಕಾರ್ಯಕರ್ತರಿಂದ ಪ್ರಶಂಸೆ ಪಡೆಯುತ್ತಿದೆ.














