ಬೆಂಗಳೂರು: ರಾಜಧಾನಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣದ ತನಿಖೆಗೆ ಇದೀಗ ಹೊಸ ತಿರುವು ಸಿಕ್ಕಿದ್ದು, ಸಿಐಡಿ ತನಿಖೆ ಇಂದು ಆರಂಭವಾಗಿದೆ. ಎಸ್‌ಪಿ ಶುಭನ್ವಿತಾ ನೇತೃತ್ವದಲ್ಲಿ ತನಿಖೆ ನಡೆಯಲಿದೆ.
ಸಿಐಡಿ ಎಸ್‌ಪಿ ಶುಭನ್ವಿತಾ ಅವರ ನೇತೃತ್ವದಲ್ಲಿ ತನಿಖಾ ತಂಡ ಬೆಳಿಗ್ಗೆಯಿಂದಲೇ ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಪರಿಶೀಲನೆ ನಡೆಸುತ್ತಿದೆ. ನೂಕುನುಗ್ಗಲು ಉಂಟಾದ ಪ್ರಮುಖ ಗೇಟ್‌ಗಳಾದ ನಂ. 7, 16, 18, 19 ಮತ್ತು 21ಗಳ ಬಳಿಯಲ್ಲೇ ವಿಶೇಷ ತನಿಖಾ ಕಾರ್ಯ ನಡೆಯುತ್ತಿದೆ. ಪ್ರಾಥಮಿಕ ತನಿಖೆಯ ಬಳಿಕ ಹೆಚ್ಚಿನ ದಾಖಲೆಗಳು ಹಾಗೂ ದೃಢೀಕರಣಕ್ಕಾಗಿ ಆರೋಪಿಗಳನ್ನು ಕಸ್ಟಡಿಗೆ ಪಡೆಯಲು ಸಿಐಡಿ ತಂಡ ತಯಾರಿ ನಡೆಸಲಿದೆ. ಬಹುತೇಕ ಸೋಮವಾರ ಬಾಡಿ ವಾರೆಂಟ್ ಮೇಲೆ ಬಂಧಿತ ನಾಲ್ವರು ಆರೋಪಿಗಳನ್ನು ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ.
ಶನಿವಾರ ಹಾಗೂ ಭಾನುವಾರ ನ್ಯಾಯಾಲಯಕ್ಕೆ ರಜೆ ಇರುವುದರಿಂದ, ಸೋಮವಾರ ಕಸ್ಟಡಿಗೆ ಪಡೆಯಲು ಸಿದ್ಧತೆ ನಡೆದಿದೆ.
ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಜೂನ್ 4ರಂದು ನಡೆದಿರುವ ಈ ದುರಂತದ ವೇಳೆ ಐಪಿಎಲ್ ತಂಡವಾದ ಆರ್‌ಸಿಬಿ ವಿಜಯೋತ್ಸವ ಸಂಭ್ರಮಾಚರಣೆಗಾಗಿ ಜನಸಾಗರ ಹರಿದುಬಂದಿದ್ದರು. ಕ್ರೀಡಾಂಗಣದ ಸುತ್ತಮುತ್ತ ಸಾವಿರಾರು ಮಂದಿ ಸೇರಿದ್ದರಿಂದ ಸ್ಥಳದಲ್ಲಿ ಭಾರೀ ಗೊಂದಲ ಉಂಟಾಗಿ ನೂಕುನುಗ್ಗಲು ಮತ್ತು ಕಾಲ್ತುಳಿತ ಸಂಭವಿಸಿತು. ಇದರಲ್ಲಿ 11 ಮಂದಿ ದುರ್ಘಟನೆಯಲ್ಲಿ ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿದ್ದಾರೆ.
ಘಟನೆ ಬಳಿಕ ರಾಜ್ಯಾದ್ಯಾಂತ ಆಕ್ರೋಶ ವ್ಯಕ್ತವಾಗಿದ್ದು, ಸರಕಾರದ ನಿರ್ಲಕ್ಷ್ಯ, ಮುಂಜಾಗ್ರತಾ ಕ್ರಮಗಳ ಕೊರತೆಯೇ ದುರಂತಕ್ಕೆ ಕಾರಣವೆಂದು ಹಲವರು ಆರೋಪಿಸಿದ್ದರು. ಈ ಹಿನ್ನೆಲೆ ನ್ಯಾ. ಸಂಸ್ಥೆಗಳು ಸಹ ತೀವ್ರ ಗಮನಹರಿಸಿದ್ದು, ಕರ್ನಾಟಕ ಹೈಕೋರ್ಟ್ ಕೂಡಾ ಈ ಕುರಿತು ಸುಮೊಟೋ (ಸ್ವಯಂ ಪ್ರೇರಿತ) ಕೇಸ್ ದಾಖಲಿಸಿಕೊಂಡಿದೆ. ಸಾರ್ವಜನಿಕ ಸುರಕ್ಷತೆಗೆ ಸಂಬಂಧಿಸಿದಂತೆ ಎಚ್ಚರಿಕೆಯಿಂದ ವರ್ತಿಸಬೇಕಾದ ಸಂದರ್ಭದಲ್ಲಿ ಅಧಿಕಾರಿಗಳ ಅಜಾಗರೂಕತೆ ಹೇಗೆ ನಡೆಯಿತು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ.
ಸಿಐಡಿಯ ತನಿಖೆಯಿಂದ ಪ್ರಾಮಾಣಿಕ ಸತ್ಯ ಹೊರಬರುತ್ತದೆ ಎಂಬ ನಿರೀಕ್ಷೆಯೊಂದಿಗೆ ರಾಜ್ಯದ ಜನತೆ ಕಾದಿದ್ದಾರೆ. ಮುಂದಿನ ದಿನಗಳಲ್ಲಿ ತನಿಖೆ ಯಾವ ರೂಪದಲ್ಲಿ ಸಾಗುತ್ತದೆ ಮತ್ತು ಯಾರು ಕಾರಣಿಯಾಗಿದ್ದಾರೆ ಎಂಬುದರ ಬಗ್ಗೆ ಇನ್ನಷ್ಟು ವಿವರಗಳು ಹೊರಬರುವ ಸಾಧ್ಯತೆ ಇದೆ.














