ಜೈಪುರ: ರಾಜಸ್ಥಾನದ ಅಲ್ವಾರ್ ನಲ್ಲಿರುವ ಇಎಸ್‍ಐಸಿ ವೈದ್ಯಕೀಯ ಕಾಲೇಜಿನ ಸರ್ಜಿಕಲ್ ಮೆಡಿಕಲ್ ಐಸಿಯುನಲ್ಲಿ ನರ್ಸಿಂಗ್ ಸಿಬ್ಬಂದಿ 32 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಸಂಬಂಧಪಟ್ಟ ವರದಿಗಳ ಪ್ರಕಾರ, ಮಹಿಳೆಯನ್ನು ಜೂನ್ 2ರಂದು ಟ್ಯೂಬೆಕ್ಟಮಿ ಶಸ್ತ್ರಚಿಕಿತ್ಸೆಗೆ ದಾಖಲಿಸಲಾಗಿತ್ತು. ಶಸ್ತ್ರಚಿಕಿತ್ಸೆಯ ನಂತರ ಜೂನ್ 4ರಂದು ರಾತ್ರಿ 1:30 ಗಂಟೆಗೆ ಆಕೆಯನ್ನು ಐಸಿಯುಗೆ ಸ್ಥಳಾಂತರಿಸಲಾಗಿತ್ತು. ಅಲ್ಲಿಯೇ, ನರ್ಸಿಂಗ್ ಸಿಬ್ಬಂದಿ ಇಂಜೆಕ್ಷನ್ ಕೊಟ್ಟು ಅರೆ ಪ್ರಜ್ಞಾವಸ್ಥೆಯಲ್ಲಿ ಇದ್ದ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ.
ಇಂಜೆಕ್ಷನ್ ನೀಡಿದ್ದರ ಪರಿಣಾಮವಾಗಿ ಸಂತ್ರಸ್ತೆ ಅರೆ ಪ್ರಜ್ಞಾವಸ್ಥೆ ತಲುಪಿದ್ದಾರೆ. ಮರುದಿನ ಜೂನ್ 5 ರಂದು, ರಾತ್ರಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ತನ್ನ ಪತಿಗೆ ತಿಳಿಸಿದ್ದಾರೆ. ನರ್ಸಿಂಗ್ ಸಿಬ್ಬಂದಿ ತನ್ನ ಸ್ಥಿತಿಯನ್ನ ದುರುಪಯೋಗ ಮಾಡಿಕೊಂಡಿದ್ದಾನೆಂದು ಹೇಳಿದ್ದಾರೆ. ಅರೆಪ್ರಜ್ಞಾವಸ್ಥೆಯಲ್ಲಿದ್ದರಿಂದ ನಾನು ವಿರೋಧಿಸಲು ಆಗಲಿಲ್ಲ, ಸಹಾಯಕ್ಕಾಗಿ ಕರೆಯಲೂ ಆಗಲಿಲ್ಲ ಎಂದು ಹೇಳಿಕೊಂಡಿದ್ದಾಳೆ. ಈ ವಿಷಯವನ್ನು ಪತಿಗೆ ತಿಳಿಸಿದ ಬಳಿಕ ಪೊಲೀಸರಿಗೆ ಸಂತ್ರಸ್ತೆ ಪತಿ ದೂರು ನೀಡಿದ್ದಾರೆ.
ಜೂನ್ 6ರಂದು ಸಂತ್ರಸ್ತೆ ವೈದ್ಯೆ ಡಾ. ದೀಪಿಕಾ ಅವರಿಗೆ ಘಟನೆ ಬಗ್ಗೆ ತಿಳಿಸಿದ್ದಾರೆ. ಆರೋಪಿಯಾದ ನರ್ಸಿಂಗ್ ಸಿಬ್ಬಂದಿಯನ್ನ ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ ಎಂದು ಎಸ್‌ಎಚ್‌ಒ ಅಜಿತ್ ಬದ್ಸಾರ ದೃಢಪಡಿಸಿದರು.
ಆರೋಪಿ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ಪ್ರಕರಣ ದಾಖಲಿಸಿದ್ದಾಗಿ ಎಚ್‍ಎಚ್‍ಓ ಅಜಿತ್ ಬಡಸಾರಾ ವಿವರಿಸಿದ್ದಾರೆ. ಎಂಐಎ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.














