ಮೈಸೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರವು 11 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಟೀಕೆಗಳನ್ನು ಹೊರಹಾಕಿದ್ದಾರೆ. ಅವರು, “ಮೋದಿ ಸರ್ಕಾರಕ್ಕೆ 10ಕ್ಕೆ ಸೊನ್ನೆ ಅಂಕ ನೀಡುತ್ತೇನೆ” ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, “ಈ ಸರ್ಕಾರದ 11 ವರ್ಷದ ಸಾಧನೆಯೆನ್ನುವುದಾದರೂ ಏನು? ಅವರು ಮಾಧ್ಯಮ ಪ್ರಚಾರದಿಂದ ಅಧಿಕಾರದಲ್ಲಿ ಉಳಿದಿದ್ದಾರೆ. ಗುಜರಾತ್ ಸಿಎಂ ಆಗಿದ್ದಾಗ ರಾಜ್ಯಗಳಿಗೆ ತೆರಿಗೆ ಪಾಲು 50% ಇರಬೇಕು ಎಂದಿದ್ದರು. ಆದರೆ ಪ್ರಧಾನಿ ಆದ ಬಳಿಕ ಏನು ಮಾಡಿದರು?” ಎಂದು ಪ್ರಶ್ನಿಸಿದರು.
ಮೋದಿ ಆಡಳಿತದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಅವರು ಗಂಭೀರ ಆರೋಪ ಹೊರಿಸಿದರು. “15ನೇ ಹಣಕಾಸು ಆಯೋಗವು ರಾಜ್ಯಕ್ಕೆ ₹11,495 ಕೋಟಿ ನೀಡಬೇಕು ಎಂದು ಶಿಫಾರಸ್ಸು ಮಾಡಿದ್ದರೂ, ಕೇಂದ್ರ ಸರ್ಕಾರ ಅದನ್ನು ನಿರ್ಲಕ್ಷಿಸಿದೆ. ಅಲ್ಲದೇ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದ ₹5,300 ಕೋಟಿ ಸಹ ನೀಡಿಲ್ಲ” ಎಂದು ಹೇಳಿದರು.
ಪ್ರಧಾನಿ ಮೋದಿಯವರು ‘ಪ್ರತಿ ವರ್ಷ 2 ಕೋಟಿ ಉದ್ಯೋಗ’ ಕೊಡುವೆನೆಂದು ಘೋಷಿಸಿದ್ದರು, ಆದರೆ ಇದು ಜಾರಿಗೆ ಬಂದಿಲ್ಲ. “ಅಮಾನ್ಯೀಕರಣದಿಂದ ಯಾರಿಗೂ ಲಾಭವಾಗಿಲ್ಲ. ರೈತರ ಸಮಸ್ಯೆ ಅವ್ಯವಸ್ಥೆಯಲ್ಲಿಯೇ ಉಳಿದಿದೆ. ಅಚ್ಚೆ ದಿನ್ ಮಾತಿನಲ್ಲಿ ಮಾತ್ರವಷ್ಟೇ ಉಳಿದಿದೆ” ಎಂದು ಸಿದ್ದರಾಮಯ್ಯ ಟೀಕಿಸಿದರು.
ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದಾಗ ಇದನ್ನು ಅನುಷ್ಠಾನ ಮಾಡಲಾಗುವುದಿಲ್ಲ, ರಾಜ್ಯ ಸರ್ಕಾರ ದಿವಾಳಿಯಾಗುತ್ತದೆ ಎಂದವರು ಅದನ್ನೇ ನಕಲು ಮಾಡಿ ರಾಜಸ್ಥಾನ, ಉತ್ತರ ಪ್ರದೇಶ, ದೆಹಲಿಯಲ್ಲಿ ಅದನ್ನೇ ಜಾರಿ ಮಾಡಿದರು ಎಂದು ಟೀಕಿಸಿದರು.
“ನಾವು ಈ ವಿಚಾರಗಳನ್ನು ಪ್ರಶ್ನಿಸಿದರೆ, ಬಿಜೆಪಿ ಅಪಪ್ರಚಾರ ಎಂದು ಹೇಳುತ್ತದೆ. ಅವರು ತಾವು ಮಾಡಿದ ಅನ್ಯಾಯಕ್ಕೆ ಉತ್ತರ ನೀಡುವ ಬದಲು, ಕಾಂಗ್ರೆಸ್ ಮೇಲೆ ಕೇವಲ ಕಳಂಕ ಹಚ್ಚಲು ಪ್ರಯತ್ನಿಸುತ್ತಿದ್ದಾರೆ” ಎಂದು ಅವರು ಆರೋಪಿಸಿದರು.














