ವಾಷಿಂಗ್ಟನ್: ಅಮೆರಿಕದ ನ್ಯೂವಾರ್ಕ್ ವಿಮಾನ ನಿಲ್ದಾಣದಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬನಿಗೆ ಅಮಾನವೀಯವಾಗಿ ನಡೆದುಕೊಂಡಿರುವ ಘಟನೆ ಹೊಸದಾಗಿ ಬೆಳಕಿಗೆ ಬಂದಿದೆ. ಗಡೀಪಾರು ಮಾಡುವ ಮೊದಲು ಅವನಿಗೆ ಕೈಕೋಳ ಹಾಕಿ ನೆಲಕ್ಕೆ ಬಿಗಿಯಾಗಿ ಹಿಡಿದು ದೌರ್ಜನ್ಯವೆಸಗಿದ ಘಟನೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವಿಡಿಯೋವನ್ನು ಭಾರತೀಯ-ಅಮೆರಿಕನ್ ಉದ್ಯಮಿ ಕುನಾಲ್ ಜೈನ್ ತಮ್ಮ ಎಕ್ಸ್ (ಹಳೆಯ ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದು, ಅಮೆರಿಕದ ಅಧಿಕಾರಿಗಳ ಕ್ರೂರ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ನಿನ್ನೆ ರಾತ್ರಿ ನ್ಯೂವಾರ್ಕ್ ವಿಮಾನ ನಿಲ್ದಾಣದಲ್ಲಿ ನಾನು ನೋಡಿದ್ದೇನು ಎಂದರೆ, ಓರ್ವ ಯುವ ಭಾರತೀಯ ವಿದ್ಯಾರ್ಥಿಯನ್ನು ಗಡೀಪಾರು ಮಾಡಲಾಗುತ್ತಿತ್ತು. ಕೈಕೋಳ ಹಾಕಿ, ಅಪರಾಧಿಯಂತೆ ಅವನನ್ನು ನೆಲಕ್ಕೆ ಒತ್ತಿಹಾಕಿ ನಡೆಸಿದರು. ಅವನು ಅಳುತ್ತಾ ಸಹಾಯಕ್ಕಾಗಿ ಯಾಚಿಸುತ್ತಿದ್ದ” ಎಂದು ಜೈನ್ ಟ್ವೀಟ್ ಮಾಡಿದ್ದಾರೆ.
ಜೈನ್ ಅವರು ಈ ಘಟನೆಯನ್ನು ನೇರವಾಗಿ ನೋಡಿದ್ದು, “ಅವನು ತನ್ನ ಕನಸುಗಳನ್ನು ಬೆನ್ನಟ್ಟುತ್ತಾ ಇಲ್ಲಿಗೆ ಬಂದಿದ್ದ. ಯಾವುದನ್ನೂ ಹಾನಿ ಮಾಡುವ ಉದ್ದೇಶದಿಂದ ಅಲ್ಲ. ಆದರೆ ಅವನಿಗೆ ನ್ಯಾಯ ಸಿಕ್ಕಿಲ್ಲ. ನಾನು ಈ ದೃಶ್ಯ ನೋಡಿ ಅಸಹಾಯಕನಾದೆ. ಇದು ಮಾನವ ದುರಂತ” ಎಂದು ಅವರು ಬರೆದಿದ್ದಾರೆ.
ಈ ಹಿನ್ನಲೆಯಲ್ಲಿ, ಅಮೆರಿಕದ ಭಾರತೀಯ ರಾಯಭಾರಿ ಕಚೇರಿಗೆ ಜೈನ್ ಪತ್ರ ಬರೆದು ಪ್ರಕರಣದ ಬಗ್ಗೆ ತನಿಖೆ ನಡೆಸಿ, ವಿದ್ಯಾರ್ಥಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದಾರೆ. ವೀಡಿಯೋ ಈಗಾಗಲೇ ಸಾವಿರಾರು ಜನರ ಗಮನ ಸೆಳೆದಿದ್ದು, ಹಲವರು ಈ ದೌರ್ಜನ್ಯವನ್ನು ಖಂಡಿಸಿದ್ದಾರೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಎಂದಿದ್ದಾರೆ.














