ಕಲಬುರ್ಗಿ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಸಂಭವಿಸಿದ ಕೋಟ್ಯಾಂತರ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ನಡೆದ ಜಾರಿ ನಿರ್ದೇಶನಾಲಯದ (ಇಡಿ) ದಾಳಿ ರಾಜಕೀಯ ಷಡ್ಯಂತ್ರದ ಭಾಗವಲ್ಲದೆ ಮತ್ತೇನೂ ಅಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇಂದು ಬೆಳಿಗ್ಗೆ ಬಳ್ಳಾರಿ ಜಿಲ್ಲೆಯಲ್ಲಿನ ಕಾಂಗ್ರೆಸ್ ಸಂಸದ ಇ ತುಕಾರಾಮ, ಶಾಸಕರಾದ ನಾರಾ ಭರತ್ ರೆಡ್ಡಿ, ಕಂಪ್ಲಿ ಗಣೇಶ್ ಮತ್ತು ಡಾ. ಶ್ರೀನಿವಾಸ್ ಅವರ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಖರ್ಗೆ, “ಇದು ಸಂಪೂರ್ಣ ರಾಜಕೀಯ ಪ್ರೇರಿತ ದಾಳಿ. ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡುವುದು ಮಾತ್ರವಲ್ಲ, ಈ ದಾಳಿಯು ಪಕ್ಷವನ್ನು ಒಳಹೊಕ್ಕು ವಿಭಜನೆ ಮಾಡುವ ಉದ್ದೇಶವಿದೆ” ಎಂದು ಖಂಡಿಸಿದರು.
ಮಲ್ಲಿಕಾರ್ಜುನ ಖರ್ಗೆ ತಮ್ಮ ಪ್ರತಿಕ್ರಿಯೆಯಲ್ಲಿ, “ಇಡಿಯ ದಾಳಿ ಎಂಬುದು ಹೊಸ ವಿಷಯವೇನಲ್ಲ. ಇಡೀ ದೇಶದ ಚುನಾವಣಾ ಸಮಯದಲ್ಲಿ ಎಲ್ಲಾ ಪಕ್ಷಗಳ ಹಣವನ್ನು ಸೀಸ್ ಮಾಡಲಾಗಿತ್ತು. ಅದರಲ್ಲಿ ಯಾವ ಪಕ್ಷದ ಹಣ ಎಷ್ಟು ಸೀಸ್ ಮಾಡಿದರು? ಆ ಹಣ ಎಲ್ಲಿ ಹೋಯಿತು ಎಂಬುದರ ಮೇಲೆ ಯಾರಿಗೂ ಸ್ಪಷ್ಟತೆ ಇಲ್ಲ” ಎಂದು ಪ್ರಶ್ನೆ ಎತ್ತಿದರು.
ಖರ್ಗೆ ಅವರು ಆರೋಪಿಸಿದ್ದು, “ಇಡಿಗೆ ಈಗಲೂ ಕಾಂಗ್ರೆಸ್ ವಿರುದ್ಧ ಸಿಟ್ಟು ಇದೆ. ಟಾರ್ಚರ್ ಮಾಡಿದರೆ ಪಕ್ಷ ಇಬ್ಬಾಗ ಆಗಬಹುದು ಎಂಬ ಇಡಿಯ ಉದ್ದೇಶ ಸ್ಪಷ್ಟವಾಗಿದೆ. ಆದರೆ, ನಮ್ಮ ಪಕ್ಷದ ನಾಯಕರು ತಮ್ಮ ನೈತಿಕ ಬಲದಿಂದ ಇಂಥ ಪ್ರಯತ್ನಗಳಿಗೆ ಅವಕಾಶ ಕೊಡುವುದಿಲ್ಲ” ಎಂದು ಹೇಳಿದರು.














