ಬೆಂಗಳೂರು: ನಗರದ ರಾಜಕುಮಾರ್ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ನಿವೃತ್ತ ಸಿಟಿ ಆರ್ಮ್ಡ್ ರಿಸರ್ವ್ (ಸಿಎಆರ್) ಸಿಬ್ಬಂದಿ ಬಸ್ ಚಕ್ರಕ್ಕೆ ಸಿಲುಕಿ ದುರ್ಮರಣ ಹೊಂದಿರುವ ಘಟನೆ ನಿನ್ನೆ ಸಂಜೆ ವರದಿಯಾಗಿದೆ.
ಮೃತ ವ್ಯಕ್ತಿಯನ್ನು ಹನುಮಂತರಾಯಪ್ಪ (71) ಎಂದು ಗುರುತಿಸಲಾಗಿದ್ದು, ಅವರು ಬೆಂಗಳೂರು ಹೊರವಲಯದ ಬಾಗಲಕುಂಟೆಯ ನಿವಾಸಿಯಾಗಿದ್ದರು. ಹನುಮಂತರಾಯಪ್ಪ ಅವರು ಕೆಲವೊಂದು ಕೆಲಸಗಳ ನಿಮಿತ್ತ ರಾಜಾಜಿನಗರದ ಕಡೆಗೆ ಬಂದು ಮೋಟಾರ್ಬೈಕ್ನಲ್ಲಿ ವಾಪಸ್ ಹೋಗುತ್ತಿದ್ದ ಸಂದರ್ಭದಲ್ಲಿಯೇ ಅಪಘಾತ ಸಂಭವಿಸಿದೆ.
ಹನುಮಂತರಾಯಪ್ಪ ಅವರು ಮಂಗಳವಾರ ಸಂಜೆ 4:30ರ ವೇಳೆಗೆ ಬೈಕ್ನಲ್ಲಿ ಮನೆಗೆ ಮರಳುತ್ತಿದ್ದ ಸಂದರ್ಭದಲ್ಲಿ, ರಾಜಕುಮಾರ್ ರಸ್ತೆಯ ಪಂಜಾಬ್ ನ್ಯಾಷನಲ್ ಬ್ಯಾಂಕ್ ಬಳಿ ಅಪಘಾತ ಸಂಭವಿಸಿದೆ. ಈ ವೇಳೆ ಪಕ್ಕದಲ್ಲಿ ಸಂಚರಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ಗೆ ಹತ್ತಿರ ಹೋಗಿ ಆಯತಪ್ಪಿ ಬಿದ್ದ ಹನುಮಂತರಾಯಪ್ಪ ಬಸ್ನ ಹಿಂದಿನ ಚಕ್ರಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡರು.
ತಕ್ಷಣವೇ ಅವರನ್ನು ಸ್ಥಳೀಯರು ಮತ್ತು ಪೊಲೀಸರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.
ಈ ಘಟನೆ ಸಂಬಂಧ ರಾಜಾಜಿನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














