ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿಜಯೋತ್ಸವ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಸುಮಾರು 300 ಪುಟಗಳ ಮಾಹಿತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದೆ.
ಈ ಕುರಿತು ಕರ್ನಾಟಕ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ. ಕಾಮೇಶ್ವರ ರಾವ್ ಅವರ ನೇತೃತ್ವದ ವಿಭಾಗೀಯ ಪೀಠದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಯಿತು. ನ್ಯಾಯಾಲಯ ಸ್ವಯಂಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ ಶೆಟ್ಟಿ ಅವರು, ಹೈಕೋರ್ಟ್ ಇತ್ತಿಚೆಗೆ ಕೇಳಿದ್ದ 9 ಪ್ರಮುಖ ಪ್ರಶ್ನೆಗಳಿಗೆ ಉತ್ತರ ಸೇರಿದಂತೆ ಕನ್ನಡದಲ್ಲಿರುವ ವರದಿಯನ್ನು ಸಲ್ಲಿಸಿದ್ದು, ಇಂಗ್ಲಿಷ್ ಅನುವಾದ ಎರಡು ದಿನಗಳಲ್ಲಿ ನೀಡುವುದಾಗಿ ತಿಳಿಸಿದ್ದಾರೆ.
ಅಡ್ವೊಕೇಟ್ ಜನರಲ್ ಅವರು, ಸರ್ಕಾರ ಇಂತಹ ದುರ್ಘಟನೆಗಳು ಮುಂದಿನ ದಿನಗಳಲ್ಲಿ ಪುನರಾವೃತವಾಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ ಮತ್ತು ಎಲ್ಲ ವಿವರಗಳನ್ನು ಸಂಪೂರ್ಣ ಪಾರದರ್ಶಕವಾಗಿ ನ್ಯಾಯಾಲಯಕ್ಕೆ ಒದಗಿಸುತ್ತಿರುವುದಾಗಿ ತಿಳಿಸಿದ್ದಾರೆ. ಸರಕಾರವು ಈ ವಿಷಯದಲ್ಲಿ ಬಚ್ಚಿಡುವಂತಹದ್ದೇನೂ ಇಲ್ಲ ಎಂಬುದಾಗಿ ಅವರು ನ್ಯಾಯಪೀಠದ ಗಮನಕ್ಕೆ ತಂದರು.
ಹೈಕೋರ್ಟ್ ಪೀಠವು ಸರ್ಕಾರಕ್ಕೆ ನಾನಾ ಪ್ರಮುಖ ನಿರ್ದೇಶನಗಳನ್ನು ನೀಡಿದೆ:
- ದುರಂತಕ್ಕೆ ಸಂಬಂಧಿಸಿದ ಎಲ್ಲಾ ಪತ್ರಗಳು, ಆಫ್‌ಲೈನ್ ಮತ್ತು ಆನ್‌ಲೈನ್ ಸಂವಹನಗಳು (ವಾಟ್ಸ್‌ಆಪ್ ಸಂದೇಶಗಳೂ ಸೇರಿ) ಇತ್ಯಾದಿಗಳನ್ನು ಮುಖ್ಯ ಕಾರ್ಯದರ್ಶಿಯ ವಶಕ್ಕೆ ಒಪ್ಪಿಸಬೇಕು.
- ಜಿಲ್ಲಾಧಿಕಾರಿ ನೇತೃತ್ವದ ತನಿಖೆ ಮತ್ತು ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹ ಅವರ ಏಕಸದಸ್ಯ ಆಯೋಗಗಳು ಯಾವ ಉದ್ದೇಶದಿಂದ ಮತ್ತು ಯಾವ ವಿಷಯಗಳ ಕುರಿತು ತನಿಖೆ ನಡೆಸಬೇಕು ಎಂಬ ಸ್ಪಷ್ಟತೆ ವರದಿಯಲ್ಲಿ ನೀಡಬೇಕೆಂದು ಸೂಚನೆ.
ವಕೀಲ ಎಂ.ಬಿ. ನರಗುಂದ ಅವರು, ಕೋವಿಡ್ ವೇಳೆ ಚಾಮರಾಜನಗರದಲ್ಲಿ ಆಮ್ಲಜನಕ ಕೊರತೆಯಿಂದ ಸಂಭವಿಸಿದ ಸಾವಿನ ಪ್ರಕರಣವನ್ನು ಉಲ್ಲೇಖಿಸಿ, ಘಟನೆಯ ಮೇಲೆ ಹೈಕೋರ್ಟ್ ನಿಗಾ ವಹಿಸಿತ್ತು. ಅದೇ ರೀತಿ ಈ ಪ್ರಕರಣದಲ್ಲೂ ಮಾಡಬೇಕು ಎಂದು ಮನವಿ ಮಾಡಿಕೊಂಡರು.
ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ್ ಕೊಂಡಜ್ಜಿಯ ಪರ ವಕೀಲ ಕೆ. ದಿವಾಕರ್ ಅವರು, 2014ರಿಂದಲೇ ರಾಷ್ಟ್ರ ಮಟ್ಟದ ವಿಪತ್ತು ನಿರ್ವಹಣಾ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರ ಪಾಲನೆ ಮಾಡುತ್ತಿಲ್ಲ ಎಂಬ ಗಂಭೀರ ಆರೋಪವನ್ನು ನ್ಯಾಯಪೀಠದ ಮುಂದೆ ಮಂಡಿಸಿದರು.
ಈ ಸಂದರ್ಭದಲ್ಲಿ ನ್ಯಾಯಪೀಠ, “ಮಧ್ಯಂತರ ಅರ್ಜಿದಾರರ ಮಾನ್ಯತೆ ಕುರಿತು ಈಗಾಗಲೇ ಯಾವುದೇ ತೀರ್ಮಾನ ನೀಡಲಾಗದು” ಎಂದು ಸ್ಪಷ್ಟಪಡಿಸಿತು.














