ತುಮಕೂರು: ಸಾಲಭಾದೆ ತಾಳಲಾರದೆ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ತುಮಕೂರಿನಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ಹಿರೇಹಳ್ಳಿ ಗ್ರಾಮದ 52 ವರ್ಷದ ರವೀಂದ್ರ ಎಂದು ಗುರುತಿಸಲಾಗಿದೆ. ರವೀಂದ್ರ ಅವರು ತಮ್ಮ ಕುಟುಂಬದೊಂದಿಗೆ ಬೆಂಗಳೂರಿನ ಯಲಹಂಕ ಪ್ರದೇಶದಲ್ಲಿ ವಾಸಿಸುತ್ತಿದ್ದರು. ತಾವು ಅನುಭವಿಸುತ್ತಿದ್ದ ಆರ್ಥಿಕ ಬಾಧೆಯಿಂದಾಗಿ ಕುಟುಂಬಕ್ಕೆ ಹೇಳದೇ ಅವರು ಮನೆ ಬಿಟ್ಟು ಹೋಗಿದ್ದರು.
ರವೀಂದ್ರ ಅವರು ಕಳೆದ ನಾಲ್ಕೈದು ದಿನಗಳಿಂದ ನಾಪತ್ತೆಯಾಗಿದ್ದು, ಅವರ ಕುಟುಂಬಸ್ಥರು ಯಲಹಂಕ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ನಾಪತ್ತೆ ಪ್ರಕರಣವಾಗಿ ದಾಖಲಿಸಿಕೊಂಡ ಪೊಲೀಸರು ಹುಡುಕಾಟ ಆರಂಭಿಸಿದ್ದರೂ, ಅತ್ತ ತುಮಕೂರಿನಲ್ಲಿ ಅವರ ಹುಟ್ಟೂರಿಗೆ ಹೋಗಿರುವುದು ಯಾರಿಗೂ ತಿಳಿದಿರಲಿಲ್ಲ.
ಇಂದು (ಜೂನ್ 13) ಬೆಳಿಗ್ಗೆ, ತುಮಕೂರು ತಾಲೂಕಿನ ಹಿರೇಹಳ್ಳಿ ಗ್ರಾಮದ ಹೊರವಲಯದ ಜಮೀನೊಂದರಲ್ಲಿ ಹುಣಸೇಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ರವೀಂದ್ರ ಅವರ ಶವ ಪತ್ತೆಯಾಯಿತು. ಸ್ಥಳೀಯರು ಈ ದೃಶ್ಯ ನೋಡಿ ಶಾಕ್ ಆಗಿದ್ದು, ತಕ್ಷಣವೇ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು.
ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ, ರವೀಂದ್ರ ಅವರು ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದರು ಎಂಬುದು ಕುಟುಂಬಸ್ಥರಿಂದ ತಿಳಿದುಬಂದಿದೆ. ವಿವಿಧ ಬ್ಯಾಂಕ್ ಹಾಗೂ ಖಾಸಗಿ ಸಾಲದಾತರಿಂದ ಪಡೆದ ಸಾಲವನ್ನು ತೀರಿಸಲಾಗದಂತಹ ಪರಿಸ್ಥಿತಿಯಲ್ಲಿ, ಅವರು ಆತ್ಮಹತ್ಯೆಗೆ ಮುಂದಾಗಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.














