ಬಾಗಲಕೋಟೆ : ಜಿಲ್ಲೆಯಲ್ಲಿ ಮನುಷ್ಯತ್ವಕ್ಕೆ ತಲೆತಗ್ಗಿಸುವಂತಹ ಭೀಕರ ಘಟನೆ ನಡೆದಿದೆ. ಇತ್ತೀಚೆಗೆ ನಡೆದ ಈ ಪೈಶಾಚಿಕ ಕೃತ್ಯದಲ್ಲಿ ದುಷ್ಕರ್ಮಿಗಳು ಹಸುವಿನ ಕೆಚ್ಚಲು ಕತ್ತರಿಸಿ ತೀವ್ರವಾಗಿ ಗಾಯಗೊಳಿಸಿರುವ ಅಮಾನುಷ ಘಟನೆ ಬೆಳಕಿಗೆ ಬಂದಿದೆ. ಘಟನೆಯು ಬಾಗಲಕೋಟೆ ತಾಲ್ಲೂಕಿನ ಕುಳಗೇರಿ ಕ್ರಾಸ್ ಬಳಿ ನಡೆದಿದ್ದು, ಸಾರ್ವಜನಿಕರಲ್ಲಿ ಆಕ್ರೋಶ ಉಂಟಾಗಿದೆ.
ಕುಳಗೇರಿ ಗ್ರಾಮದ ಭರಮಪ್ಪ ಕುರಿ ಎಂಬುವವರು ಸಾಕಿದ ಹಸುವನ್ನು ಗುರಿಯಾಗಿಸಿಕೊಂಡ ದುಷ್ಕರ್ಮಿಗಳು, ರಾತ್ರಿ ವೇಳೆ ಮಲಗಿದ್ದ ಹಸುವಿನ ಕೆಚ್ಚಲು ಬರ್ಬರವಾಗಿ ಕೊಯ್ಯುವ ಮೂಲಕ ತೀವ್ರ ವಿಕೃತಿ ಮೆರೆದಿದ್ದಾರೆ. ಇಂದು ಬೆಳಗ್ಗೆ ತಮ್ಮ ಹಸುವಿನ ಕೆಚ್ಚಲಿನಿಂದ ತೀವ್ರ ರಕ್ತಸ್ರಾವವಾಗುತ್ತಿರುವುದು ಕಂಡು ಬಂದ ಭರಮಪ್ಪ ಅವರು ತಕ್ಷಣವೇ ಪಶು ಆಸ್ಪತ್ರೆ ಸಂಪರ್ಕಿಸಿ ಚಿಕಿತ್ಸೆಗಾಗಿ ಒಯ್ಯಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಕುಳಗೇರಿ ಉಪಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಂಬಂಧಪಟ್ಟ ಆರೋಪಿಗಳ ಪತ್ತೆಗಾಗಿ ತನಿಖೆ ಆರಂಭಿಸಿದ್ದಾರೆ. ಸ್ಥಳೀಯ ಜನರ ಹೇಳಿಕೆಯನ್ನು ಪಡೆದುಕೊಂಡು ಸಿಸಿಟಿವಿ ಅಥವಾ ಇತರ ಸಾಕ್ಷ್ಯಾಧಾರಗಳ ಸಹಾಯದಿಂದ ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ಕ್ರಮ ಕೈಗೊಂಡಿದ್ದಾರೆ.














