ಮನೆ ಅಪರಾಧ ಕೋಲಾರ ಜಿಲ್ಲಾ ಆಸ್ಪತ್ರೆಗೆ ಹೆರಿಗೆಗಾಗಿ ಬಂದ ಮಹಿಳೆ, ಮಗು ಬಿಟ್ಟು ಪರಾರಿ.!

ಕೋಲಾರ ಜಿಲ್ಲಾ ಆಸ್ಪತ್ರೆಗೆ ಹೆರಿಗೆಗಾಗಿ ಬಂದ ಮಹಿಳೆ, ಮಗು ಬಿಟ್ಟು ಪರಾರಿ.!

0

ಕೋಲಾರ: ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ತಾನೇ ಹೆತ್ತ ನವಜಾತ ಹೆಣ್ಣು ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು, ತಾಯಿ ಪರಾರಿ ಆಗಿರುವ ಕ್ರೂರ ಘಟನೆ ಜೂನ್ 13ರ ಮುಂಜಾವಿನಲ್ಲಿ ನಡೆದಿದೆ.

ಮೌನಿಕಾ ಎಂಬ ಹೆಸರಿನಲ್ಲಿ ದಾಖಲಾಗಿದ್ದ ಈ ಯುವತಿ ಜೂನ್ 12ರ ಸಂಜೆ ಹೆರಿಗೆ ನೋವಿನಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಅವಳ ಜೊತೆಯಲ್ಲಿ ಓರ್ವ ವೃದ್ಧೆಯೂ ಇದ್ದರು. ಆಸ್ಪತ್ರೆ ಸಿಬ್ಬಂದಿಯ ಪ್ರಕಾರ, ತುರ್ತು ಪರಿಸ್ಥಿತಿಯಲ್ಲಿದ್ದ ಕಾರಣ ಮಾನವೀಯ ದೃಷ್ಟಿಕೋನದಿಂದ ಆಸ್ಪತ್ರೆಯ ಡಾ. ಶಾಂತ ಅವರು ತಕ್ಷಣ ಚಿಕಿತ್ಸೆ ನೀಡಿ ನಾರ್ಮಲ್ ಹೆರಿಗೆಯನ್ನು ಯಶಸ್ವಿಯಾಗಿ ನಡೆಸಿದ್ದರು. ಹೆರಿಗೆ ನಂತರ ಮಹಿಳೆ ತನ್ನ ಹೆಸರನ್ನು ಮೌನಿಕಾ, ಪತಿಯ ಹೆಸರನ್ನು ಶ್ರೀನಿವಾಸ್ ಎಂದು ದಾಖಲಿಸಿದ್ದರೂ, ಯಾವುದೇ ಸರಿಯಾದ ವಿಳಾಸ ನೀಡಿಲ್ಲ.

ಹೆರಿಗೆ ಮುಗಿದ ನಂತರ, ಜೂನ್ 13ರಂದು ಮುಂಜಾನೆ 5 ಗಂಟೆಗೆ ‘ಟೀ ಕುಡಿದು ಬರುತ್ತೇನೆ’ ಎಂದು ಹೇಳಿ, ತನ್ನ ಜೊತೆಯಲ್ಲಿದ್ದ ವೃದ್ಧೆಯ ಜೊತೆ ಸೇರಿ ಆಸ್ಪತ್ರೆಯಿಂದ ಪರಾರಿಯಾದಳು. ಅನುಮಾನಾಸ್ಪದ ರೀತಿಯಲ್ಲಿ ಮಹಿಳೆ ಪರಾರಿಯಾಗಿದ್ದರಿಂದ, ಸಿಬ್ಬಂದಿ ಕೂಡಲೇ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಆಕೆಯು ನೀಡಿದ್ದ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿದಾಗ, ಮತ್ತೊಬ್ಬ ವ್ಯಕ್ತಿ ಕರೆ ಸ್ವೀಕರಿಸಿದ್ದರಿಂದ ಈಕೆ ನೀಡಿದ್ದ ವಿವರಗಳು ಸುಳ್ಳು ಎಂಬುದು ದೃಢವಾಯಿತು. ತಕ್ಷಣವೇ ಆಸ್ಪತ್ರೆಯ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದಾರೆ. ಸಿಸಿ ಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಪೊಲೀಸರು ತನಿಖೆ ಮುಂದುವರೆಸಿದ್ದು, ಮಹಿಳೆಯ ಬಗ್ಗೆ ಮಾಹಿತಿಗಾಗಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.

ಈ ಮಧ್ಯೆ, ಆಸ್ಪತ್ರೆಯ ವೈದ್ಯರು ತಾಯಿಂದ ತ್ಯಜಿಸಲ್ಪಟ್ಟ ಮಗುವಿನ ಆರೈಕೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. 1.5 ಕೆ.ಜಿ. ತೂಕದ ನವಜಾತ ಹೆಣ್ಣು ಮಗುವಿಗೆ ಬೇರೊಂದು ತಾಯಿಯ ಎದೆ ಹಾಲು ನೀಡಿ ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸುತ್ತಿದ್ದಾರೆ. ಮಗು ಪ್ರಸ್ತುತ ವೈದ್ಯಕೀಯ ಪರಿಶೀಲನೆಯಲ್ಲಿದ್ದು, ಸ್ಥಿತಿ ಸ್ಥಿರವಾಗಿದೆ.