ಮನೆ ರಾಜ್ಯ ಪ್ರಿಯಾಂಕ್ ಖರ್ಗೆ ಸಚಿವರಾದ ಬಳಿಕ ಕಲಬುರಗಿ ಜಿಲ್ಲೆಯಲ್ಲಿ ಗೂಂಡಾ ಪ್ರವೃತ್ತಿ ಹೆಚ್ಚಾಗಿದೆ: ಸಿದ್ದಲಿಂಗ ಸ್ವಾಮೀಜಿ ಆರೋಪ

ಪ್ರಿಯಾಂಕ್ ಖರ್ಗೆ ಸಚಿವರಾದ ಬಳಿಕ ಕಲಬುರಗಿ ಜಿಲ್ಲೆಯಲ್ಲಿ ಗೂಂಡಾ ಪ್ರವೃತ್ತಿ ಹೆಚ್ಚಾಗಿದೆ: ಸಿದ್ದಲಿಂಗ ಸ್ವಾಮೀಜಿ ಆರೋಪ

0

ಕಲಬುರಗಿ: ಪ್ರಿಯಾಂಕ್ ಖರ್ಗೆ ಸಚಿವರಾಗಿ ನೇಮಕವಾದ ಬಳಿಕ ಕಲಬುರಗಿ ಜಿಲ್ಲೆಯಲ್ಲಿ ಗೂಂಡಾ ಪ್ರವೃತ್ತಿ ಹೆಚ್ಚಾಗಿದೆ ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಆರೋಪಿಸಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅವರು, ಚಿತ್ತಾಪುರದಲ್ಲಿ ಅಕ್ರಮ ನಡೆಯುತ್ತಿದೆ. ಅದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಅವರ ಕುಮ್ಮಕ್ಕಿದೆ‌ ಎಂದು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಮೇಲೆ ಅಪರಿಚಿತರಿಂದ ಮಾರಣಾಂತಿಕ ಹಲ್ಲೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಲಬುರಗಿ ಜಿಲ್ಲೆಯಲ್ಲಿ ಕಾನೂನು ಮೀರಿ ದುಷ್ಟಶಕ್ತಿಗಳ ಅಟ್ಟಹಾಸ ಮಿತಿಮೀರಿದೆ. ಕಲಬುರಗಿಯಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಆಗುತ್ತಿದೆ. ಗೂಂಡಾಗಳ ಪ್ರಭುತ್ವ ಮಿತಿಮೀರಿದೆ. ಅಕ್ರಮ ಮರಳು ಲಾರಿ ಹಿಡಿದು ಮಣಿಕಂಠ ರಾಠೋಡ್ ಪೊಲೀಸ್ ಠಾಣೆಗೆ ಒಪ್ಪಿಸಿದರೆ, ಅವರ ಮೇಲೆಯೇ ರಾಬರಿ ಕೇಸ್ ಹಾಕಿದ್ದಾರೆ ಎಂದು ಸ್ವಾಮೀಜಿ ಆರೋಪಿಸಿದ್ದಾರೆ.

ಆಸ್ಪತ್ರೆ ಶುಚಿತ್ವದ ಬಗ್ಗೆ ಪ್ರಶ್ನೆ ಮಾಡಿದಕ್ಕೆ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂಬುದಾಗಿ ಮಣಿಕಂಠ ಅವರ ಮೇಲೆ ಕೇಸ್ ದಾಖಲಿಸಿದ್ದಾರೆ. ಹಾಗಾದರೆ ಹೋರಾವನ್ನೇ ಮಾಡಬಾರದಾ? ಪ್ರಿಯಾಂಕ್ ಖರ್ಗೆ ಅವರದ್ದು ಬೇರೆಯೇ ಸಂವಿಧಾನ ಇದೆಯೇ? ಜಿಲ್ಲೆಯಲ್ಲಿ ಗೂಂಡಾ ಪ್ರವೃತ್ತಿ ಹೆಚ್ಚಾಗಿದೆ. ಮಣಿಕಂಠ ರಾಠೋಡ್ ಮೇಲೆ ಹಲ್ಲೆ ಮಾಡಿರುವ ಆರೋಪಿಗಳನ್ನ ಶೀಘ್ರ ಬಂಧಿಸಬೇಕು. ಇಲ್ಲದಿದ್ರೆ ಕಲಬುರಗಿ ಎಸ್ಪಿ ಕಚೇರಿ ಎದುರು ಬೃಹತ್ ಪ್ರತಿಭಟನೆ ಮಾಡುವುದಾಗಿ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಈ ಹಿಂದೆಯೂ ಹಲವು ಆರೋಪಗಳು ಕೇಳಿಬಂದಿವೆ. ಪ್ರಿಯಾಂಕ್ ಖರ್ಗೆ ಕಾರ್ಯವೈಖರಿ ಬಗ್ಗೆ ಪ್ರತಿಪಕ್ಷ ಬಿಜೆಪಿ ಆಗಾಗ ವಾಗ್ದಾಳಿ ನಡೆಸುತ್ತಲೇ ಇದೆ. ಈ ಮಧ್ಯೆ, ಪ್ರಿಯಾಂಕ್ ಖರ್ಗೆ ಸಹ ತಮ್ಮ ವಿರುದ್ಧದ ಆರೋಪಗಳಿಗೆ ತೀಕ್ಷ್ಣ ತಿರುಗೇಟು ನೀಡುತ್ತಲೇ ಬಂದಿದ್ದಾರೆ.

ಹಿಂದಿನ ಲೇಖನಮಸೂದೆಗಳ ಅಂಕಿತಕ್ಕೆ ವಿಳಂಬ: ಕೇಂದ್ರ ಸರ್ಕಾರ ಹಾಗೂ ರಾಜ್ಯಪಾಲರಿಗೆ ನೋಟಿಸ್ ಜಾರಿ ಮಾಡಿದ ಸುಪ್ರೀಂಕೋರ್ಟ್
ಮುಂದಿನ ಲೇಖನಮಂಡ್ಯ: ಕಾಡಾನೆ ದಾಳಿಗೆ ಮಹಿಳೆ ಬಲಿ