ಧರ್ಮಸ್ಥಳದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಾಗೂ ಅಪಪ್ರಚಾರ ನಡೆಸುತ್ತಿರುವ ಆರೋಪದ ಮೇಲೆ ಗಿರೀಶ್ ಮಟ್ಟಣ್ಣ, ಮಹೇಶ್ ಶೆಟ್ಟಿ ತಿಮ್ಮರೊಡ್ಡಿ ಮತ್ತು ಸಮೀರ್ ವಿರುದ್ಧ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಎಸ್‌ಪಿ ಅವರಿಗೆ ದೂರು ಸಲ್ಲಿಸಿ, ಈ ದೂರಿನಲ್ಲಿ ತಪ್ಪು ಮಾಹಿತಿ ನೀಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.
ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ. ಮಂಜುನಾಥ್ ನೇತೃತ್ವದಲ್ಲಿ ಈ ದೂರು ನೀಡಲಾಗಿದೆ. ಇತ್ತೀಚೆಗೆ ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂತು ಹಾಕಲಾಗಿದೆ ಎಂದು ‘ಮಾಸ್ಕ್‌ಮ್ಯಾನ್’ ಎಂಬಾತ ಆರೋಪಿಸಿದ್ದನು. ಆದರೆ ಎಸ್‌ಐಟಿ ತನಿಖೆಯಲ್ಲಿ ಆತನ ಹೇಳಿಕೆಗಳು ಸುಳ್ಳು ಎಂದು ಸ್ಪಷ್ಟ ಮಾಹಿತಿ ದೊರೆತಿದೆ. ಇಷ್ಟಾದರೂ, ನಕಲಿ ಹೋರಾಟಗಾರರಾದ ಗಿರೀಶ್ ಮಟ್ಟಣ್ಣ, ಮಹೇಶ್ ಶೆಟ್ಟಿ ಮತ್ತು ಸಮೀರ್ ಸೇರಿದಂತೆ ಕೆಲವರು ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುವುದನ್ನು ಮುಂದುವರೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಧರ್ಮಸ್ಥಳ ಪ್ರಕರಣದಲ್ಲಿ ಸುಜಾತ ಭಟ್ ಅವರನ್ನು ಮುಂದಿಟ್ಟುಕೊಂಡು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆಂದು ಆರೋಪಿಸಿ ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.















