ಟ್ರಂಪ್ ಸುಂಕ ಸಮರ ಆರಂಭಿಸಿದ ಕೂಡಲೇ ಭಾರತ ಸೇರಿದಂತೆ 100ಕ್ಕೂ ಹೆಚ್ಚು ದೇಶಗಳ ಮೇಲೆ ತೆರಿಗೆ ಸಮರ ಆರಂಭಿಸಿದ್ದರು. ನಂತರ ಉಳಿದ ದೇಶಗಳು ವ್ಯಾಪಾರ ಸಂಬಂಧ ಮಾತುಕತೆ ನಡೆಸಲು ಆಸಕ್ತಿ ತೋರಿದ ಬೆನ್ನಲ್ಲೇ ಅಮೆರಿಕ ಸುಂಕ ಸಮರವನ್ನು ತಡೆ ಹಿಡಿದಿತ್ತು. ಈ ಸಂದರ್ಭದಲ್ಲಿ ಭಾರತ ಅಮೆರಿಕದ ಜೊತೆ ವ್ಯಾಪಾರ ಮಾತುಕತೆ ನಡೆಸತೊಡಗಿತು.
ಬಹುತೇಕ ವಿಚಾರಗಳ ಮಧ್ಯೆ ಭಾರತ ಮತ್ತು ಅಮೆರಿಕ ಒಪ್ಪಿಗೆ ನೀಡಿದರೂ ಮಹತ್ವದ ಕೆಲ ವಿಚಾರಗಳ ಭಾರತಕ್ಕೆ ಒಪ್ಪಿಗೆ ನೀಡಿಲ್ಲ. ಮುಖ್ಯವಾಗಿ ಕೃಷಿ, ಹೈನು ಉತ್ಪನ್ನಗಳ ವಲಯವಾಗಿದೆ. ಮೀನುಗಾರಿಕೆ ಸಂಬಂಧಿಸಿದಂತೆ ಅಮೆರಿಕದ ಉತ್ಪನ್ನಗಳಿಗೆ ಮುಕ್ತವಾಗಿಸಲು ಕೇಂದ್ರ ಸರ್ಕಾರವು ಒಪ್ಪಿಗೆ ನೀಡಿಲ್ಲ. ಅಮೆರಿಕ ಉಕ್ಕು, ಅಲ್ಯೂಮಿನಿಯಂ ಮತ್ತು ಆಟೋಮೊಬೈಲ್ ಉತ್ಪನ್ನಗಳ ಮೇಲೆ ಹೆಚ್ಚಿನ ಸುಂಕ ವಿಧಿಸಬಾರದು ಎಂದು ಭಾರತ ಇರಿಸಿರುವ ಬೇಡಿಕೆಯನ್ನು ಒಪ್ಪಿಲ್ಲ ಎನ್ನಲಾಗಿದೆ.
ಅಮೆರಿಕದ ಡೈರಿ ಉತ್ಪನ್ನಗಳಿಗೆ ಭಾರತ ಅನುಮತಿ ನೀಡಿಲ್ಲ ಯಾಕೆ ಎನ್ನುವುದಕ್ಕೆ ಕಾರಣ ಇದೆ. ಭಾರತದಲ್ಲಿ ದನಗಳಿಗೆ ಹುಲ್ಲು, ಒಣಗಿದ ಮೇವು, ಧಾನ್ಯಗಳು, ಮತ್ತು ಪಶು ಆಹಾರವನ್ನು ನೀಡಲಾಗುತ್ತದೆ. ಆದರೆ ಅಮೆರಿಕದಲ್ಲಿ ಹಾಗಲ್ಲ. ಅಮೆರಿಕದಲ್ಲಿ ಜಾನುವಾರುಗಳಿಗೆ ಆಹಾರವಾಗಿ ನಾನ್-ವೆಜ್ ಆಹಾರಗಳನ್ನು ನೀಡಲಾಗುತ್ತದೆ.
ಮಾಂಸ ಮತ್ತು ಮೂಳೆ ಊಟ, ಒಣಗಿದ ರಕ್ತ ಮತ್ತು ಕೋಳಿ ತ್ಯಾಜ್ಯ ಸೇರಿದಂತೆ ಪ್ರಾಣಿ ಉತ್ಪನ್ನಗಳನ್ನು ಜಾನುವಾರು ಆಹಾರದಲ್ಲಿ ಬಳಸಲು ಅವಕಾಶ ನೀಡುತ್ತವೆ. ತ್ಯಾಜ್ಯವನ್ನು ಕಡಿಮೆ ಮಾಡಲು ಮತ್ತು ಮೇವಿನ ವೆಚ್ಚವನ್ನು ಕಡಿಮೆ ಮಾಡಲು ಅಮೆರಿಕದ ರೈತರು ಈ ಆಹಾರವನ್ನು ನೀಡುತ್ತಾರೆ. ಈ ರೀತಿಯ ಆಹಾರ ನೀಡಲು ಅಮೆರಿಕದ ಕಾನೂನಿನಲ್ಲಿ ಅನುಮತಿ ಇದೆ.
ಭಾರತದಲ್ಲಿ ಹಸುಗಳನ್ನು ಪವಿತ್ರ ಮತ್ತು ಪೂಜ್ಯ ಭಾವದಿಂದ ನೋಡಲಾಗುತ್ತದೆ. ಹಸುಗಳು ತಿಂದ ಪ್ರಾಣಿ ಉತ್ಪನ್ನಗಳಿಂದ ಬರುವ ಹಾಲು ಸೇವಿಸುವುದನ್ನು ಸಾಂಸ್ಕೃತಿಕ ಮತ್ತು ಧಾರ್ಮಿಕ ನಂಬಿಕೆಗಳ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ. ಭಾರತದಲ್ಲಿ ಸುಮಾರು 8 ಕೋಟಿಗೂ ಅಧಿಕ ಮಂದಿ ಹೈನುಗಾರಿಕೆ ಉದ್ಯಮದಲ್ಲಿ ತೊಡಗಿದ್ದಾರೆ. ಭಾರತದ ಜಿಡಿಪಿಗೆ ಹೈನುಗಾರಿಕೆ 5% ಕೊಡುಗೆ ನೀಡುತ್ತದೆ.
ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಇರುವ ಕಾರಣ ಭಾರತದ ಮಾರುಕಟ್ಟೆ ಪ್ರವೇಶಿಲು ಅಮೆರಿಕ ಮೊದಲಿನಿಂದಲೂ ಭಾರೀ ಪ್ರಯತ್ನ ಮಾಡುತ್ತಿದೆ. ಒಂದು ವೇಳೆ ಭಾರತ ಅನುಮತಿ ನೀಡಿದರೆ ರೈತರು ಬೀದಿಗೆ ಇಳಿಯುವ ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಸರ್ಕಾರವೇ ಪತನ ಹೊಂದುವ ಸಾಧ್ಯತೆಯಿದೆ. ಈ ಕಾರಣಕ್ಕೆ ಇಲ್ಲಿಯವರೆಗೆ ಯಾವುದೇ ಸರ್ಕಾರಗಳು ಭಾರತದ ಮಾರುಕಟ್ಟೆಗೆ ಅಮೆರಿಕದ ಡೈರಿ ಉತ್ಪನ್ನ ಪ್ರವೇಶಕ್ಕೆ ಅನುಮತಿ ನೀಡಿಲ್ಲ ಎಂದು ತಿಳಿದು ಬಂದಿದೆ.














