ಶ್ರೀನಗರ : ಜಮ್ಮು ಕಾಶ್ಮೀರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕತ್ರಾದಲ್ಲಿರುವ ವೈಷ್ಣೋದೇವಿ ಯಾತ್ರಾ ಮಾರ್ಗದಲ್ಲಿ ಮತ್ತೆ ಭಾರಿ ಭೂಕುಸಿತ ಉಂಟಾಗಿದ್ದು, 30ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ನಿರಂತರ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು, ಸ್ಥಳೀಯ ಪೊಲೀಸ್ ಹಾಗೂ ಎನ್‌ಡಿಆರ್‌ಎಫ್ ಸ್ಥಳಕ್ಕೆ ದೌಡಾಯಿಸಿ, ರಕ್ಷಣಾ ಕಾರ್ಯಚರಣೆ ನಡೆಸಿದ್ದಾರೆ. ಭೂಕುಸಿತದಿಂದ 30ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು, 23 ಜನರು ಗಾಯಗೊಂಡಿದ್ದಾರೆ. ಇನ್ನೂ ಅವಶೇಷಗಳಡಿಯಲ್ಲಿ ಹಲವರು ಸಿಲುಕಿಕೊಂಡಿದ್ದು, ಸಿಆರ್‌ಪಿಎಫ್‌ನ 6ನೇ ಬೆಟಾಲಿಯನ್ ಸೈನಿಕರು ಹಾಗೂ ರಕ್ಷಣಾ ತಂಡಗಳು ಶೋಧ ಕಾರ್ಯ ನಡೆಯುತ್ತಿದೆ.
ನೆನ್ನೆ (ಮಂಗಳವಾರ) ವೈಷ್ಣೋದೇವಿ ದೇಗುಲಕ್ಕೆ ಹೋಗುವ ಮಾರ್ಗದಲ್ಲಿ ಅರ್ಧಕುವರಿಯಲ್ಲಿರುವ ಇಂದ್ರಪ್ರಸ್ಥ ಭೋಜನಾಲಯದ ಬಳಿ ಭೂಕುಸಿತ ಸಂಭವಿಸಿತ್ತು. ಈ ವೇಳೆ 8 ಮಂದಿ ಮೃತಪಟ್ಟಿದ್ದರು. ಇದಕ್ಕೂ ಮುನ್ನ ಜಮ್ಮುವಿನ ದೋಡಾ ಜಿಲ್ಲೆಯಲ್ಲಿ ಮೇಘಸ್ಫೋಟ ಸಂಭವಿಸಿ, ನಾಲ್ವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಗುಡ್ಡಗಾಡು ಮತ್ತು ತಗ್ಗು ಪ್ರದೇಶಗಳಲ್ಲಿ ವಾಸಿಸುವ ನಿವಾಸಿಗಳು ಮನೆಯೊಳಗೆ ಇರುವಂತೆ ಹಾಗೂ ಸುರಕ್ಷತಾ ಕ್ರಮಗಳನ್ನು ಪಾಲಿಸಲು ಹವಾಮಾನ ಇಲಾಖೆ ಸೂಚನೆ ನೀಡಿದೆ.














