ಮನೆ ರಾಜ್ಯ ಭ್ರಷ್ಟಾಚಾರ ಆರೋಪ – ಆನೇಕಲ್‌ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿದ ರೈತರು

ಭ್ರಷ್ಟಾಚಾರ ಆರೋಪ – ಆನೇಕಲ್‌ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿದ ರೈತರು

0

ಆನೇಕಲ್ : ತಾಲ್ಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದ್ದು, ರೈತರು ಹಾಗೂ ಬಡವರು ಬಂದರೆ ಯಾವುದೇ ಕೆಲಸ ಆಗುತ್ತಿಲ್ಲ ಎಂದು ಆರೋಪಿಸಿ ಇಂದು ಆನೇಕಲ್ ತಾಲೂಕು ಕಚೇರಿಗೆ ಭಾರತೀಯ ಕಿಸಾನ್ ಸಂಘದ ವತಿಯಿಂದ ರೈತ ಪ್ರತಿಭಟನಾಕಾರರು ಮುತ್ತಿಗೆ ಹಾಕಿದರು.

ರೈತರು ಖಾತೆ ಮಾಡಿಸಿಕೊಳ್ಳೋದಕ್ಕಾಗಲಿಮ, ಸರ್ಕಾರಿ ಗೋಮಾಳ ವಿಚಾರ, ಕೆರೆ ಸೇರಿದಂತೆ ಪೌಡಿ ಮಾಡಿಸಿಕೊಳ್ಳಲಾಗಲಿ, ಯಾವುದೇ ಕೆಲಸಕ್ಕೆ ಕಚೇರಿಗೆ ಬಂದ್ರೆ ರೈತರಿಗೆ ಯಾರೊಬ್ಬರೂ ಸ್ಪಂದಿಸುತ್ತಿಲ್ಲ. ಜೊತೆಗೆ ರೈತರ ಯಾವುದೇ ಕೆಲಸ ಆಗುತ್ತಿಲ್ಲ ಎಂದು ಆರೋಪಿಸಿ ರೈತರು ತಹಶೀಲ್ದಾರ್‌ ಕಚೇರಿಗೆ ಮುತ್ತಿಗೆ ಹಾಕಿದ್ದರು.

ಈ ವೇಳೆ ರೈತರನ್ನ ಕಚೇರಿಯಿಂದ ಹೊರಗೆ ಕಳಿಸಲು ಪೊಲೀಸರು ಹರಸಾಹಸ ಪಟ್ಟರು. ಅಲ್ಲದೇ ಪೊಲೀಸರು ಹಾಗೂ ರೈತರ ನಡುವೆ ಮಾತಿನ ಚಕಮಕಿ ಸಹ ನಡೆಯಿತು. ಆದಾಗ್ಯೂ ಪ್ರತಿಭಟನಾಕಾರರು ತಹಶೀಲ್ದಾರ್‌ ಸ್ಥಳಕ್ಕೆ ಬರಬೇಕೆಂದು ಪಟ್ಟುಹಿಡಿದು ಕುಳಿತರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರೈತರು, ರೈತರಿಗೆ ಇಲ್ಲಿ ಯಾವುದೇ ಕೆಲಸ ಆಗುತ್ತಿಲ್ಲ. ಇಂತಹ ಅಧಿಕಾರಿಗಳು ನಮಗೆ ಬೇಡ, ತಹಶೀಲ್ದಾರ್ ಅಂತೂ ಕಚೇರಿಗೆ ಬರೋದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.