ಮನೆ ರಾಷ್ಟ್ರೀಯ ಅಮೆರಿಕ ಸುಂಕ ಸಮರ; ತೈಲ ಖರೀದಿಗೆ ಭಾರತಕ್ಕೆ ದೊಡ್ಡ ಡಿಸ್ಕೌಂಟ್‌ ಕೊಟ್ಟ ರಷ್ಯಾ

ಅಮೆರಿಕ ಸುಂಕ ಸಮರ; ತೈಲ ಖರೀದಿಗೆ ಭಾರತಕ್ಕೆ ದೊಡ್ಡ ಡಿಸ್ಕೌಂಟ್‌ ಕೊಟ್ಟ ರಷ್ಯಾ

0

ನವದೆಹಲಿ : ಟ್ಯಾರಿಫ್‌ ವಿಚಾರವಾಗಿ ಅಮೆರಿಕದ ಮುನಿಸಿನ ನಡುವೆ ಭಾರತಕ್ಕೆ ಹೆಚ್ಚಿನ ರಿಯಾಯಿತಿಯಲ್ಲಿ ತೈಲ ಪೂರೈಸಲು ರಷ್ಯಾ ಮುಂದಾಗಿದೆ. ಅಮೆರಿಕದ ಸುಂಕದ ಹೊರೆಯನ್ನು ಭಾರತ ಇನ್ನೂ ಎದುರಿಸುತ್ತಿದೆ. ಇದನ್ನು ಮನಗಂಡಿರುವ ರಷ್ಯಾದ ತೈಲ ಬೆಲೆ ಭಾರತಕ್ಕೆ ಪ್ರತಿ ಬ್ಯಾರಲ್‌ಗೆ 3 ರಿಂದ 4 ಡಾಲರ್‌ ನಷ್ಟು ಕಡಿಮೆಯಾಗಿದೆ. ಸೆಪ್ಟೆಂಬರ್ ಅಂತ್ಯ ಮತ್ತು ಅಕ್ಟೋಬರ್‌ನಲ್ಲಿ ಲೋಡ್ ಆಗುವ ಸರಕುಗಳಿಗೆ ರಷ್ಯಾದ ಉರಲ್ ದರ್ಜೆಯ ಬೆಲೆಯನ್ನು ಕಡಿಮೆಗೆ ನೀಡಲಾಗುತ್ತಿದೆ.

ರಷ್ಯಾದ ತೈಲವನ್ನು ಖರೀದಿಸಿ ಉಕ್ರೇನ್ ಯುದ್ಧಕ್ಕೆ ಉತ್ತೇಜನ ನೀಡಿದ್ದಕ್ಕಾಗಿ ಶಿಕ್ಷಿಸಲು ಟ್ರಂಪ್ ಆಡಳಿತ ಕಳೆದ ವಾರ ಭಾರತದ ಮೇಲಿನ ಸುಂಕವನ್ನು ಶೇ.50 ಕ್ಕೆ ದ್ವಿಗುಣಗೊಳಿಸಿತು. 2022 ರಲ್ಲಿ, ರಷ್ಯಾ-ಉಕ್ರೇನ್ ಯುದ್ಧದ ಆರಂಭದಲ್ಲಿ ಭಾರತವು ರಷ್ಯಾದ ಕಚ್ಚಾ ತೈಲದ ಪ್ರಮುಖ ಆಮದುದಾರನಾಗಿತ್ತು. ಇದೀಗ ಅಮೆರಿಕದಿಂದ ಪದೇ ಪದೇ ಟೀಕೆಗೊಳಗಾದ ನಂತರ, ಭಾರತವು ಸಂಬಂಧದಲ್ಲಿ ರಷ್ಯಾ ಮತ್ತು ಚೀನಾಗೆ ಮತ್ತಷ್ಟು ಹತ್ತಿರವಾಗಿದೆ.

ಚೀನಾದಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿಯೂ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಮತ್ತು ಭಾರತ ವಿಶೇಷ ಸಂಬಂಧವನ್ನು ಹಂಚಿಕೊಳ್ಳುತ್ತವೆ ಎಂದು ಹೇಳಿದ್ದರು. ಅದೇ ರೀತಿ ಅವರು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಸಹ ಭೇಟಿಯಾದರು. ಎರಡೂ ದೇಶಗಳು ಪ್ರತಿಸ್ಪರ್ಧಿಗಳಲ್ಲ, ಪಾಲುದಾರರಾಗಲು ಪ್ರತಿಜ್ಞೆ ಮಾಡಿವೆ.

ಪುಟಿನ್ ಉಕ್ರೇನ್ ಮೇಲೆ ಆಕ್ರಮಣ ಮಾಡುವ ಮೊದಲು ಭಾರತವು ರಷ್ಯಾದ ತೈಲವನ್ನು ಬಹಳ ಕಡಿಮೆ ಪ್ರಮಾಣದಲ್ಲಿ ಖರೀದಿಸುತ್ತಿತ್ತು. ಈಗ ಏನಾಯಿತು? ರಷ್ಯಾದ ಸಂಸ್ಕರಣಾಗಾರರು ರಿಯಾಯಿತಿಗಳನ್ನು ನೀಡುತ್ತಾರೆ. ಭಾರತ ಅದನ್ನು ಸಂಸ್ಕರಿಸುತ್ತದೆ.

ನಂತರ ಯುರೋಪ್, ಆಫ್ರಿಕಾ ಮತ್ತು ಏಷ್ಯಾಕ್ಕೆ ಪ್ರೀಮಿಯಂನಲ್ಲಿ ಮಾರಾಟ ಮಾಡುತ್ತದೆ. ಇದು ರಷ್ಯಾದ ಯುದ್ಧ ತಂತ್ರವನ್ನು ಉತ್ತೇಜಿಸಿದಂತಿದೆ ಎಂದು ಶ್ವೇತಭವನದ ಸಲಹೆಗಾರ ಪೀಟರ್ ನವರೊ ಭಾರತದ ವಿರುದ್ಧ ಕಟುವಾದ ಟೀಕೆಯನ್ನು ಮಾಡಿದ್ದರು ಎಂದು ಹೇಳಲಾಗಿದೆ.