ಮನೆ ರಾಜ್ಯ ರಾಜ್ಯದಲ್ಲಿ ಓಮೈಕ್ರಾನ್‌ ಉಪತಳಿಗಳು ಪತ್ತೆ

ರಾಜ್ಯದಲ್ಲಿ ಓಮೈಕ್ರಾನ್‌ ಉಪತಳಿಗಳು ಪತ್ತೆ

0

ಬೆಂಗಳೂರು (Bengaluru): ಕೊರೊನಾ ವೈರಾಣುವಿನ ರೂಪಾಂತರಿ ಓಮೈಕ್ರಾನ್‌ನ ಉಪತಳಿಗಳು ರಾಜ್ಯದಲ್ಲಿ ಪತ್ತೆಯಾಗಿವೆ.

ಓಮೈಕ್ರಾನ್‌ನ ಉಪತಳಿಗಳಾದ ಬಿಎ 3, ಬಿಎ 4 ಹಾಗೂ ಬಿಎ 5 ರಾಜ್ಯದಲ್ಲಿ ಪತ್ತೆಯಾಗಿವೆ. ಕೋವಿಡ್‌ ಸೋಂಕು ದೃಢಪಟ್ಟವರ ಮಾದರಿಗಳನ್ನು ವೈರಾಣುವಿನ ವಂಶವಾಹಿ ಸಂರಚನಾ ವಿಶ್ಲೇಷಣೆಗೆ (ಜಿನೋಮಿಕ್ ಸಿಕ್ವೆನ್ಸೀಸ್‌) ಒಳಪಡಿಸಿದಾಗ ಉಪತಳಿಗಳು ದೃಢಪಟ್ಟಿವೆ.

ರಾಜ್ಯದಲ್ಲಿ ಕಾಣಿಸಿಕೊಂಡ ಕೋವಿಡ್ ಮೂರನೇ ಅಲೆಗೆ ಓಮೈಕ್ರಾನ್‌ನ ಉಪತಳಿಗಳಾದ ಬಿಎ1.1.529, ಬಿಎ1 ಮತ್ತು ಬಿಎ2 ಕಾರಣವಾಗಿದ್ದವು. ಇದೀಗ ಬಿಎ 3, ಬಿಎ 4 ಹಾಗೂ ಬಿಎ 5 ಉಪತಳಿಗಳು ಪತ್ತೆಯಾಗಿವೆ. 

2022ರ ಮೇ ಮತ್ತು ಜೂನ್ ತಿಂಗಳಲ್ಲಿ ನಡೆಸಲಾದ ಜಿನೋಮಿಕ್ ಸಿಕ್ವೆನ್ಸೀಸ್‌ ಪರೀಕ್ಷೆಯಲ್ಲಿ ಶೇ.98 ರಷ್ಟು ಮಂದಿಯಲ್ಲಿ ಓಮೈಕ್ರಾನ್‌ನ ಬಿಎ1.1.529, ಬಿಎ1 ಮತ್ತು ಬಿಎ2 ಉಪತಳಿಗಳು ಪತ್ತೆಯಾಗಿವೆ. ಶೇ.2 ರಷ್ಟು ಹೊಸ ಉಪತಳಿಗಳು ದೃಢಪಟ್ಟಿವೆ.

ವಿಶ್ವ ಆರೋಗ್ಯ ಸಂಸ್ಥೆ ಗುರುತಿಸಿರುವ ಕೊರೊನಾ ವೈರಾಣುವಿನ ಆಲ್ಫಾ 156, ಬೀಟಾ 8, ಡೆಲ್ಟಾ ಮತ್ತು ಉಪತಳಿಗಳು 4,625, ಇಟಾ, ಕಪ್ಪಾ ಮತ್ತು ಪಾಂಗೊ 345 ಹಾಗೂ ಓಮೈಕ್ರಾನ್‌ನ 7,620 ಪ್ರಕರಣಗಳು ರಾಜ್ಯದಲ್ಲಿ ಈವರೆಗೆ ದೃಢಪಟ್ಟಿವೆ.

1,194 ಪ್ರಕರಣಗಳಲ್ಲಿ ಓಮೈಕ್ರಾನ್‌ನ ಉಪತಳಿಯಾದ ಬಿಎ1.1.529 ಖಚಿತಪಟ್ಟಿದೆ. ಬಿಎ1 ಉಪತಳಿ 101, ಬಿಎ2 ಉಪತಳಿ 6,281, ಬಿಎ3 ಉಪತಳಿ 2, ಬಿಎ4 ಉಪತಳಿ 4 ಹಾಗೂ ಬಿಎ5 ಉಪತಳಿ 38 ಪ್ರಕರಣಗಳಲ್ಲಿ ದೃಢಪಟ್ಟಿವೆ.