ಮಹದೇಶ್ವರ ಬೆಟ್ಟ (ಚಾಮರಾಜನಗರ): ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಗುರುವಾರ ಬೆಳಿಗ್ಗೆ ಆಯೋಜಿಸಲಾಗಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ 48 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ದೇವಾಲಯದ ಆವರಣದಲ್ಲಿರುವ ರಂಗಮಂದಿರದಲ್ಲಿ ಬೆಳಿಗ್ಗೆ 8.40ರ ಕಟಕ ಲಗ್ನದಲ್ಲಿ ವಿವಾಹ ನೆರವೇರಿತು. ಸ್ಥಳೀಯ, ಹೊರ ಜಿಲ್ಲೆ ಹಾಗೂ ನೆರೆಯ ತಮಿಳುನಾಡಿನಿಂದಲೂ ನೋಂದಣಿ ಮಾಡಿದ್ದ ಜೋಡಿಗಳು ಮಹದೇಶ್ವರನ ಸನ್ನಿಧಿಯಲ್ಲಿ ಹಸಮಣೆ ಏರಿದರು.
ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿ, ಶಾಸಕ ಆರ್.ನರೇಂದ್ರ, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಹೆಚ್ಚವರಿ ಜಿಲ್ಲಾಧಿಕಾರಿ ಹಾಗೂ ಪ್ರಾಧಿಕಾರದ ಕಾರ್ಯದರ್ಶಿ ಎಸದ.ಕಾತ್ಯಾಯಿನಿದೇವಿ ಅವರು ನವ ದಂಪತಿಗಳಿಗೆ ಶುಭಹಾರೈಸಿದರು.
1989ರಿಂದ ಬೆಟ್ಟದಲ್ಲಿ ಸಾಮೂಹಿಕ ವಿವಾಹ ಸಮಾರಂಭ ನಡೆಸಲಾಗುತ್ತಿದೆ. ಇದು 32ನೇ ಸಮಾರಂಭವಾಗಿದೆ.