ಮೈಸೂರು(Mysuru): ಬೆಳೆ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಂಡು ಸಮಗ್ರ ಕೃಷಿಯನ್ನು ಅಳವಡಿಸಿಕೊಂಡು ಹಣ್ಣು ತರಕಾರಿ ಬೆಳೆಗಳಿಗೆ ಹೆಚ್ಚು ಒತ್ತು ನೀಡಿದರೆ ರೈತರ ನಷ್ಟ ಕಡಿಮೆ ಮಾಡಿಕೊಳ್ಳಲು ಸಾಧ್ಯ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.
ಬೆಂಗಳೂರಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಹಾಗೂ ರೈತಮಿತ್ರ ರೈತ ಉತ್ಪಾದಕ ಸಂಸ್ಥೆ ಸಹಯೋಗದಲ್ಲಿ ತರಕಾರಿ ನಡೆದ ಸಭೆಯಲ್ಲಿ ಬೆಳೆಗಾರರ ಕಾರ್ಯಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರೈತರು ಕೀಟನಾಶಕ ರಸಗೊಬ್ಬರ ಹಂತ ಹಂತವಾಗಿ ಕಡಿಮೆ ಮಾಡಿಕೊಂಡು ಸಾವಯುವ ಕೃಷಿಯ ಕಡೆ ಗಮನ ಹರಿಸಿದರೆ ಮಾನವನ ಆರೋಗ್ಯ ಸುಧಾರಣೆ ಯಾಗಲು ಸಾಧ್ಯವಾಗುತ್ತದೆ. ಇಂದು ಕೀಟನಾಶಕ ರಸಗೊಬ್ಬರ ಗಳಿಂದ ಆಹಾರ ಉತ್ಪಾದಿಸಿದ ಕಾರಣ ಆರೋಗ್ಯ ಭೂಮಿ ಫಲವತ್ತತೆ ಪ್ರಕೃತಿ ಸಂಪತ್ತು ಹಾಳಾಗುತ್ತದೆ, ಬಹು ಬೆಳೆ ಪದ್ಧತಿ ಸಮಗ್ರ ಕೃಷಿ ಕೈಗೊಳ್ಳುವ ಮೂಲಕ ರಾಸಾಯನಿಕ ಮುಕ್ತ ತರಕಾರಿ ಬೆಳೆಗಳನ್ನು ಬೆಳೆದು ತಿನ್ನುವ ಮೂಲಕ ಕುಟುಂಬದ ಆರೋಗ್ಯ ವೃದ್ಧಿಸಿ ಕೊಂಡು ಸಮಾಜದ ಆರೋಗ್ಯವನ್ನು ಕಾಪಾಡಬೇಕು ಎಂದರು.
ಸಂಶೋಧಕ ಡಾ ನಾರಾಯಣಸ್ವಾಮಿ ಮಾತನಾಡಿ, ಕೃಷಿ ಸಂಬಂಧಿತ ಸಂಶೋಧನಾ ಸಂಸ್ಥೆಗಳು ರೈತ ಉತ್ಪಾದಕ ಕಂಪನಿಗಳು ಸದಸ್ಯರ ಜೊತೆ ಒಪ್ಪಂದ ಮಾಡಿಕೊಂಡು ರೈತರ ಹೊಲದಲ್ಲಿ ಆಯಾ ಪ್ರದೇಶಕ್ಕೆ ಹೊಂದಿಕೆಯಾಗುವ ಬೆಳೆಗಳನ್ನು ಬೆಳೆಯಲು ಸಂಶೋಧನೆಯ ನೆರವು ನೀಡಲಾಗುವುದು ಹಾಗೂ ಉಚಿತ ಬೀಜ ಫಲವತ್ತತೆ ಸಂವರ್ಧನೆಗೆ ಬೇಕಾದ ತಂತ್ರಜ್ಞಾನಗಳನ್ನು ರೈತರಿಗೆ ನೀಡಲಾಗುವುದು ಎಂದರು.
ತೋಟಗಾರಿಕೆ ಇಲಾಖೆ ಇಲಾಖೆಯ ಸಹಾಯಕ ಅಧಿಕಾರಿ ಮಾತನಾಡಿ ತರಕಾರಿ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಕಲ್ಪಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ತಿಳಿಸಿದರು.
ಸಂಶೋಧಕ ವೆಂಕಟಕುಮಾರ್ ಮಾತನಾಡಿ, ರೈತ ಉತ್ಪಾದಕ ಸಂಸ್ಥೆಯಲ್ಲಿ ನೊಂದಾಯಿಸಿದ ರೈತರಿಗೆ ಮುಂದಿನ ದಿನಗಳಲ್ಲಿ ರೈತರಿಗೆ ಅವಶ್ಯಕತೆ ಇರುವ ಸಂದರ್ಭದಲ್ಲಿ ಉಚಿತ ಸಸಿಗಳನ್ನು ನೀಡಲಾಗುವುದು ಎಂದರು.
ಕಾರ್ಯಗಾರದಲ್ಲಿ ಭಾಗವಹಿಸಿದ್ದ ನೂರಕ್ಕೂ ಹೆಚ್ಚು ರೈತರಿಗೆ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯಿಂದ ವೆಜಿಟೇಬಲ್ ಸ್ಪೆಷಲ್, ನೀಮ್ ಸೋಪ್, ಜೀವಾಣುಗೊಬ್ಬರ ಉಚಿತವಾಗಿ ನೀಡಲಾಯಿತು.
ಆರಂಭದಲ್ಲಿ ಅತ್ತಳ್ಳಿ ದೇವರಾಜ್ ಸ್ವಾಗತಿಸಿದರು. ನಿರ್ದೇಶಕರಾದ ಕೆಎಸ್ ನಾಗರಾಜಮೂರ್ತಿ ವಂದಿಸಿದರು.