ಮನೆ ಕ್ರೀಡೆ ಸೂರ್ಯಕುಮಾರ್‌ ಕ್ಯಾಮೆರಾ ಹಿಂದೆ ಕೈಕುಲುಕಿದ್ರು – ಕ್ಯಾಮೆರಾ ಮುಂದೆ ನಾಟಕವಾಡಿದ್ರು..!

ಸೂರ್ಯಕುಮಾರ್‌ ಕ್ಯಾಮೆರಾ ಹಿಂದೆ ಕೈಕುಲುಕಿದ್ರು – ಕ್ಯಾಮೆರಾ ಮುಂದೆ ನಾಟಕವಾಡಿದ್ರು..!

0

ದುಬೈ : ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್‌ ಯಾದವ್‌ ಖಾಸಗಿಯಾಗಿ ನನ್ನೊಂದಿಗೆ ಕೈ ಕುಲುಕಿದ್ರು, ಆದ್ರೆ ಕ್ಯಾಮೆರಾ ಮುಂದೆ ಇರುವಾಗ ಕೈಕುಲುಕದೇ ನಾಟಕವಾಡಿದ್ರು. ಅವರು ತಮಗೆ ನೀಡಿದ ಸೂಚನೆಗಳನ್ನಷ್ಟೇ ಪಾಲಿಸುತ್ತಿದ್ದರು ಎಂದು ಪಾಕಿಸ್ತಾನ ಕ್ರಿಕೆಟ್‌ ತಂಡದ ನಾಯಕ ಸಲ್ಮಾನ್‌ ಅಲಿ ಅಘಾ ಬೇಸರ ಹೊರಹಾಕಿದ್ದಾರೆ.

ದುಬೈನಲ್ಲಿ ನಡೆದ ಏಷ್ಯಾಕಪ್‌ ಫೈನಲ್‌ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೂರ್ಯಕುಮಾರ್‌ ಕ್ಯಾಮೆರಾ ಮುಂದೆ ಇದ್ದಾಗ ಕೈ ಕುಲುಕಲಿಲ್ಲ, ತಮಗೆ ನೀಡಿದ ಸೂಚನೆಗಳನ್ನಷ್ಟೇ ಪಾಲಿಸುತ್ತಿದರು, ಅದು ನನಗೆ ಗೊತ್ತಾಯ್ತು ಎಂದು ಹೇಳಿದರು.

ಇದರ ಹೊರತಾಗಿ ಟೀಂ ಇಂಡಿಯಾ ಆಟಗಾರರು ಇಡೀ ಟೂರ್ನಿಯುದ್ಧಕ್ಕೂ ಹಿಡಿತ ಸಾಧಿಸಿದ್ರು, ಶಿಸ್ತಿನಿಂದಲೇ ವರ್ತಿಸಿದ್ರು. ಆದ್ರೆ ನಮಗೆ ಮಾಡಿರೋದು ತುಂಬಾ ನಿರಾಸಾದಾಯಕ. ಅವರು ಕೈ ಕುಲುಕದೇ ನಮ್ಮನ್ನ ಮಾತ್ರ ಅಗೌರವಿಸಲಿಲ್ಲ. ಕ್ರಿಕೆಟನ್ನೇ ಅಗೌರವಿಸಿದ್ದಾರೆ.

ಅಕಸ್ಮಾತ್‌ ಭಾರತ ಮತ್ತು ಪಾಕ್‌ ಪಂದ್ಯವನ್ನ ಒಂದು ಮಗು ನೋಡುತ್ತಿದ್ದರೆ, ಅದಕ್ಕೆ ಒಳ್ಳೆಯ ಸಂದೇಶ ಕೊಟ್ಟಂತಾಗುವುದಿಲ್ಲ. ಏಕೆಂದ್ರೆ ನಮ್ಮನ್ನು ರೋಲ್‌ ಮಾಡೆಲ್‌ಗಳ ರೀತಿ ನೋಡುತ್ತಿರುತ್ತಾರೆ. ನಾವು ಈ ರೀತಿ ವರ್ತಿಸುವುದು ಅವರಿಗೆ ಮಾದರಿಯಾದಂತೆ ಆಗುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೋಟ್ಯಂತರ ಜನರ ಮುಂದೆಯೇ ಪಾಕಿಸ್ತಾನ ಕ್ರಿಕೆಟ್‌ ತಂಡದ ನಾಯಕ ಸಲ್ಮಾನ್‌ ಅಲಿ ಅಘಾ ಭಾರತದ ಆಪರೇಷನ್‌ ಸಿಂಧೂರ ಪರಾಕ್ರಮವನ್ನ ಒಪ್ಪಿಕೊಂಡಿದ್ದಾರೆ. ಭಾರತದ ʻಆಪರೇಷನ್ ಸಿಂಧೂರʼ ಸಮಯದಲ್ಲಿ ಮೃತರಾದ ಪಾಕಿಸ್ತಾನಿ ನಾಗರಿಕರ ಕುಟುಂಬಕ್ಕೆ ಪಂದ್ಯ ಶುಲ್ಕವನ್ನು ಪಾಕ್‌ ತಂಡವು ದಾನ ಮಾಡಲಿದೆ ಎಂದು ಘೋಷಿಸಿದರು.

ಭಾನುವಾರ ನಡೆದ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 5 ವಿಕೆಟ್‌ಗಳಿಂದ ಮಣಿಸಿದ ಭಾರತ, ಪ್ರಶಸ್ತಿ ಪ್ರದಾನ ಸಮಾರಂಭಕ್ಕಾಗಿ ಕಾಯುತ್ತಿತ್ತು. ಆದರೆ, ವಿಜೇತರ ಟ್ರೋಫಿಯನ್ನು ಯಾರು ನೀಡುತ್ತಾರೆ ಎಂದು ಭಾರತೀಯ ತಂಡದ ಆಡಳಿತ ಮಂಡಳಿ ವಿಚಾರಿಸಿದಾಗ, ಅದು ಎಸಿಸಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಎಂದು ತಿಳಿದು ಬಂತು. ಪಾಕಿಸ್ತಾನಿ ಸಚಿವರಾಗಿರುವ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಭಾರತ ತಂಡವು ಸ್ಪಷ್ಟವಾಗಿ ನಿರಾಕರಿಸಿತು.

ಈ ಹಿನ್ನೆಲೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವು ಬಹಳ ವಿಳಂಬವಾಗಿ ನಡೆಯಿತು. ನಖ್ವಿ ವೇದಿಕೆಯ ಮೇಲೆ ಬಂದು ನಿಂತಾಗ, ಭಾರತೀಯ ಆಟಗಾರರು ಸುಮಾರು 15 ಗಜಗಳಷ್ಟು ದೂರದಲ್ಲಿಯೇ ನಿಂತು, ಮುಂದೆ ಬರಲು ಒಪ್ಪಲೇ ಇಲ್ಲ. ಈ ಸಂದರ್ಭದಲ್ಲಿ, ಇನ್ನೂ ಕ್ರೀಡಾಂಗಣದಲ್ಲಿದ್ದ ಭಾರತೀಯ ಅಭಿಮಾನಿಗಳು ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗುತ್ತಾ ನಖ್ವಿಯವರನ್ನು ಹೀಯಾಳಿಸಿದರು.