ಮೈಸೂರು(Mysuru): ರಾಜ್ಯದ ರೈತರ ಸಾಲ ನೀತಿ ಬದಲಾಯಿಸಿ ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ರದ್ದುಗೊಳಿಸಲು ಒತ್ತಾಯಿಸಿ, ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಜೂ. 28 ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಆರ್ ಬಿಐ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಜಲದರ್ಶಿನಿಯಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಒತ್ತಾಯಿಸಿ ರೈತರು ಕೃಷಿ ಚಟುವಟಿಕೆ ನಡೆಸಲು ಬ್ಯಾಂಕ್‌ನಲ್ಲಿ ಸಾಲ ಕೇಳಲು ಹೋದಾಗ ಸಾಲಗಾರರ ಸಿಬಿಲ್ ಪರೀಕ್ಷೆ ಮಾಡಿ ನಂತರ ಸಾಲ ಕೊಡಬೇಕೆ ಬೇಡವೆ ಎಂದು ತಿಳಿಸುತ್ತೇವೆ ಎನ್ನುತ್ತಾರೆ. ಇದರಿಂದ ಬಹುತೇಕ ರೈತರಿಗೆ ಸಾಲ ಸಿಗದಂತೆ ಆಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ರೈತ ದೇಶದ ಜನರಿಗೆ ಆಹಾರ ಉತ್ಪಾದನೆ ಮಾಡುವ ಸಲುವಾಗಿ ಬೆಳೆ ಬೆಳೆಯಲು, ವ್ಯವಸಾಯ ಚಟುವಟಿಕೆಗಾಗಿ ಸಾಲ ತೆಗೆದುಕೊಳ್ಳುತ್ತಾನೆ. ಕೆಲವು ಸಂದರ್ಭ ಪ್ರಕೃತಿಯ ವಿಕೋಪ, ಅತಿವೃಷ್ಟಿ, ಅನಾವೃಷ್ಟಿ, ಪ್ರವಾಹ ಹಾನಿ, ಬರಹಾನಿ ಸಿಲುಕಿ ಬೆಳೆ ನಷ್ಟ ಅನುಭವಿಸುತ್ತಾನೆ. ಇದರಿಂದ ಕೆಲವು ಸಂದರ್ಭಗಳಲ್ಲಿ ನಿಯಮಗಳ ಪ್ರಕಾರ ಸಕಾಲಕ್ಕೆ ಸಾಲ ಪಾವತಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ರೈತನ ಸಿಬಿಲ್ ಸ್ಕೋರ್ ಉತ್ತಮವಾಗಿರಲು ಸಾಧ್ಯವಾಗುವುದಿಲ್ಲ. ಆದ್ದರಿಂದಾಗಿ ರೈತರ ಕೃಷಿ ಚಟುವಟಿಕೆಗೆ ನೀಡುವ ಸಾಲಕ್ಕೆ ಸಿಬಿಲ್ ಸ್ಕೋರ್ ತಾಳೆ ಹಾಕುವ ಪದ್ಧತಿಯನ್ನು ರದ್ದು ಪಡಿಸಬೇಕು ಎಂದು ಒತ್ತಾಯಿಸಿದರು.
ರೈತರು ಬ್ಯಾಂಕುಗಳಲ್ಲಿ ಸಾಲ ತೆಗೆದುಕೊಂಡು 12 ತಿಂಗಳ ಅವಧಿಯೊಳಗೆ ಸಾಲದ ಮೇಲಿನ ಬಡ್ಡಿ ಪಾವತಿಸಿದರೂ ಕೂಡ ಕೊರೋನಾ ಸಂಕಷ್ಟದಲ್ಲಿರುವ ರೈತರಿಗೆ ಬ್ಯಾಂಕುಗಳು ಸಾಲವನ್ನು ನವೀಕರಿಸುತ್ತಿಲ್ಲ. ಸಾಲದ ಹಣ ಸಂಪೂರ್ಣವಾಗಿ ತುಂಬಿ ಹೊಸದಾಗಿ ಸಾಲ ಪಡೆಯಬೇಕೆಂದು ಹೇಳುತ್ತಿದ್ದಾರೆ. ಇದು ರೈತರಿಗೆ ಸಂಕಷ್ಟವನ್ನು ಉಂಟು ಮಾಡಿದೆ ಈ ಬಗ್ಗೆ ನಿಯಮವನ್ನು ತಿದ್ದುಪಡಿ ಮಾಡಿ ನವೀಕರಣಕ್ಕೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ರೈತರ ಕೃಷಿ ಭೂಮಿಯ ಮೌಲ್ಯವನ್ನು ಆಧರಿಸಿ ಕಾರು, ಮೋಟಾರ್ ಬೈಕ್, ಮನೆಕಟ್ಟಲು ಸಾಲ ನೀಡುವ ರೀತಿ ಶೇಕಡ 70ರಷ್ಟು ಸಾಲ ಕೊಡುವ ಪದ್ಧತಿಯನ್ನು ಜಾರಿಗೆ ತರಬೇಕು. ಇದರಿಂದ ಅನೇಕ ರೈತರ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ. ನೆಮ್ಮದಿಯಾಗಿ ಕೃಷಿ ಚಟುವಟಿಕೆ ಮಾಡಲು ಅನುಕೂಲವಾಗುತ್ತದೆ ಎಂದು ಹೇಳಿದರು.
ಸಂಕಷ್ಟದಲ್ಲಿರುವ ರೈತರ ಸಾಲ ವಸೂಲಾತಿಗಾಗಿ ಬ್ಯಾಂಕ್ ಗಳು ನೋಟಿಸ್ ನೀಡಿ ಕಿರುಕುಳ ನೀಡುತ್ತಿವೆ ಹಾಗೂ ನ್ಯಾಯಾಲಯಕ್ಕೆ ದಾವೆ ದಾಖಲಿಸುತ್ತಿವೆ ಇದು ಕೂಡಲೇ ನಿಲ್ಲಬೇಕು. ಸರ್ಕಾರಿ ಯೋಜನೆಗಳ ಪ್ರೋತ್ಸಾಹಧನ , ಕಿಸಾನ್ ಸಮ್ಮಾನ್ ಹಣ, ಹಾಲು ಮಾರಾಟ ಮಾಡಿದ ಹಣ ರೈತರ ಸಾಲಕ್ಕೆ ವಜಾ ಮಾಡಿಕೊಳ್ಳುವುದನ್ನು ತಪ್ಪಿಸಬೇಕು ಎಂದು ಕೋರಿದರು.
ಆನ್ಲೈನ್ ಹಣ ಪಾವತಿ, ರೈತರ ಖಾತೆಯಿಂದ ಅನಾಮಧೇಯರು ಹಣ ವಂಚಿಸುತ್ತಿರುವ ಬಗ್ಗೆ ಜಿಲ್ಲಾಮಟ್ಟದಲ್ಲಿ ತನಿಖಾ ತಂಡ ರಚಿಸಿ ವಂಚಕರನ್ನು ಕಠಿಣ ಶಿಕ್ಷೆಗೆ ಒಳಪಡಿಸಿ ತಕ್ಷಣವೇ ನ್ಯಾಯ ದೊರಕಿಸಿಕೊಡಬೇಕು. ಹಣ ಕಳೆದುಕೊಂಡವರಿಗೆ ತಕ್ಷಣವೇ ಹಣ ವಾಪಸ್ ಕೊಡಿಸುವ ನೀತಿ ರೂಪಿಸಬೇಕು ಎಂದು ಆಗ್ರಹಿಸಿದರು.
ಮೇಲ್ಕಂಡ ವಿಷಯಗಳ ಬಗ್ಗೆ ಆರ್ ಬಿ ಐ ಗೆ ಪತ್ರ ಬರೆಯಲಾಗಿದ್ದರೂ ಯಾವುದೇ ಕ್ರಮ ಜಾರಿಯಾಗಿಲ್ಲ. ಆದ್ದರಿಂದ ರಾಜ್ಯದ ರೈತರು ಆರ್ ಬಿಐ ಕಚೇರಿಯ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ . ನಿರ್ಲಕ್ಷ ಮಾಡಿದರೆ ನಿರಂತರ ಹೋರಾಟ ಮುಂದುವರಿಸ ಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅತ್ತಹಳ್ಳಿ ದೇವರಾಜ್, ಸೋಮಶೇಖರ್ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಕಿರಗಸೂರ್ ಶಂಕರ್,, ಬರಡನಪುರ ನಾಗರಾಜ್, ಅಂಬಳೆ ಮಂಜುನಾಥ್, ಕಾಟೂರ ಮಹದೇವಸ್ವಾಮಿ, ವರಕೂಡು ನಾಗೇಶ್, ಜಯರಾಮೆಗೌಡ ಇದ್ದರು.