ಮಡಿಕೇರಿ : ಕರುನಾಡಿನ ಜೀವನದಿ ಕಾವೇರಿಯ ಪವಿತ್ರ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ. ಸಹಸ್ರಾರು ಭಕ್ತರು ತೀರ್ಥಸ್ವರೂಪಿಣಿ ಕಾವೇರಿಮಾತೆಯನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.
ಪವಿತ್ರ ತೀರ್ಥೋದ್ಭವ ಕ್ಷೇತ್ರ ತಲಕಾವೇರಿಯಲ್ಲಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ವರ್ಷಕ್ಕೊಮ್ಮೆ ಘಟಿಸುವ ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ದೇಶದ ವಿವಿಧೆಡೆಗಳಿಂದ ಸಹಸ್ರಾರು ಸಂಖ್ಯೆಯ ಭಕ್ತರು ಕಾತರರಾಗಿದ್ದಾರೆ.
ಕೊಡಗಿನ ಜನರ ಕುಲದೇವತೆ ಕರ್ನಾಟಕದ ಜೀವನದಿ ಕಾವೇರಿಯ ತೀರ್ಥೋದ್ಭವಕ್ಕೆ ಜಿಲ್ಲಾಡಳಿತ ತಯಾರಿ ಮಾಡಿಕೊಂಡಿದೆ. ಇಂದು (ಶುಕ್ರವಾರ) ಮಧ್ಯಾಹ್ನ 1:44ಕ್ಕೆ ಸಲ್ಲುವ ಮಕರ ಲಗ್ನದಲ್ಲಿ ಪವಿತ್ರ ತೀರ್ಥೋದ್ಭವ ಜರುಗಲಿದೆ. ಬ್ರಹ್ಮಕುಂಡಿಕೆಯಿಂದ ಪವಿತ್ರ ತೀರ್ಥ ಉಕ್ಕಿಬರಲಿದೆ. ಈ ವಿಸ್ಮಯ ನೋಡಲು ಜನರು ಕಾತರರಾಗಿ ಕಾಯುತ್ತಿದ್ದಾರೆ.
ತೀರ್ಥೋದ್ಭವಕ್ಕೂ ಮೊದಲು ತಲಕಾವೇರಿ ಕ್ಷೇತ್ರದಲ್ಲಿ ಧಾರ್ಮಿಕ ಪೂಜೆಗಳು ಜರುಗಲಿವೆ. ಮಹಾಮಂಗಳಾರತಿ ನಂತರ ಭಕ್ತರಿಗೆ ಕ್ಷೇತ್ರಕ್ಕೆ ಪ್ರವೇಶ ಸಿಗಲಿದೆ. ಇಂದು ಬೆಳಗ್ಗೆಯಿಂದಲೇ ತೀರ್ಥೋದ್ಭವದ ತನಕ ಮಂತ್ರಪಠಣ ನಡೆಯಲಿದೆ.
ಪವಿತ್ರ ತೀರ್ಥೋದ್ಭವವನ್ನು ಕಣ್ತುಂಬಿಕೊಳ್ಳಲು ಡಿಸಿಎಂ ಡಿಕೆ ಶಿವಕುಮಾರ್, ಸಚಿವ ರಾಮಲಿಂಗಾರೆಡ್ಡಿ ತಲಕಾವೇರಿಗೆ ಆಗಮಿಸಲಿದ್ದಾರೆ. ಇನ್ನೂ ಕಾವೇರಿ ತೀರ್ಥೋದ್ಭವ ನೋಡಲು ಮಂಡ್ಯ, ಮೈಸೂರು, ಬೆಂಗಳೂರು, ಹಾಸನ ಜಿಲ್ಲೆ ಸೇರಿದಂತೆ ದೇಶದ ಹಲವೆಡೆಗಳಿಂದ ಭಕ್ತರು ಬರುತ್ತಾರೆ.
ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಸ್ನಾನಮಾಡಿ ಅಲ್ಲಿ ಭಗಂಢೇಶ್ವರನಿಗೆ ಪೂಜೆ ಸಲ್ಲಿಸಿ ನಂತರ ಕಾವೇರಿ ಮಾತೆಯ ದರ್ಶನ ಪಡೆಯುತ್ತಾರೆ. ತೀರ್ಥೋದ್ಭವವಾಗುತ್ತಿದ್ದಂತೆ ತೀರ್ಥವನ್ನು ಸಂಗ್ರಹಿಸಿ ಮನೆಗೆ ಕೊಂಡೊಯ್ಯುತ್ತಾರೆ. ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಭದ್ರತೆಗಾಗಿ ಹೆಚ್ಚಿನ ಸಿಸಿಟಿವಿ ಸೇರಿದಂತೆ 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.














