ಮನೆ ರಾಜಕೀಯ `ಬಾಂಬೆ ಫೈಲ್ಸ್’ ಈ ವರ್ಷವೇ ಬಿಡುಗಡೆ: ಹೆಚ್.ವಿಶ್ವನಾಥ್

`ಬಾಂಬೆ ಫೈಲ್ಸ್’ ಈ ವರ್ಷವೇ ಬಿಡುಗಡೆ: ಹೆಚ್.ವಿಶ್ವನಾಥ್

0

ಮೈಸೂರು(Mysuru): ‘ಜೆಡಿಎಸ್–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ  ಧೋರಣೆ ವಿರೋಧಿಸಿ ನಾನು ಸೇರಿದಂತೆ ಶಾಸಕರು ಮುಂಬೈಗೆ ಹೋಗಿದ್ದ ದಿನಗಳ ಮಾಹಿತಿ ನೀಡುವ `ಬಾಂಬೆ ಫೈಲ್ಸ್‌’ ಪುಸ್ತಕವನ್ನು ಇದೇ ವರ್ಷ ಬಿಡುಗಡೆ ಮಾಡುತ್ತೇನೆಂದು ಬಿಜೆಪಿಯ ವಿಧಾನಪರಿಷತ್ ಸದಸ್ಯ ಎ.ಹೆಚ್. ವಿಶ್ವನಾಥ್ ತಿಳಿಸಿದರು.

ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿದ ಅವರು, ‘ಪುಸ್ತಕಕ್ಕೆ ಬಾಂಬೆ ಡೇಸ್ ಎಂದು ಹೆಸರಿಡಲು ತೀರ್ಮಾನಿಸಿದ್ದೆ. ಆದರೆ `ಕಾಶ್ಮೀರ್ ಫೈಲ್ಸ್‌’ ಚಲನಚಿತ್ರ ಬಂದ ಬಳಿಕ ‘ಬಾಂಬೆ ಫೈಲ್ಸ್‌’ ಎಂದು ಬದಲಿಸಿದ್ದೇನೆ. ಅದರಲ್ಲಿ ಬಾಂಬ್‌ ಇರುವುದಿಲ್ಲ; ವಾಸ್ತವಾಂಶ ಒಳಗೊಂಡಿರಲಿದೆ’ ಎಂದರು.

ಬಾಂಬೆ ಫೈಲ್ಸ್ ರಾಜಕಾರಣದ ದೊಡ್ಡ ಚರಿತ್ರೆ. ನಾವೆಲ್ಲರೂ ಹಣಕ್ಕಾಗಿ ಬಿಜೆಪಿ ಸೇರಿದೆವು ಎಂಬ ಮಾತುಗಳಿವೆ. ಅದೆಲ್ಲವೂ ಸುಳ್ಳು. ವಾಸ್ತವಾಂಶಗಳನ್ನು ಪುಸ್ತಕದಲ್ಲಿ ದಾಖಲಿಸಲಿದ್ದೇನೆ  ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿ ಕ್ಷಿಪ್ರಕ್ರಾಂತಿ:

ಮಹಾರಾಷ್ಟ್ರದಲ್ಲಿ ಸರ್ಕಾರ ಅಸ್ಥಿರತೆ ಬಗ್ಗೆ ಪ್ರತಿಕ್ರಿಯಿಸಿ, ‘ಹಿಂದೆ ಕರ್ನಾಟಕದಲ್ಲಿ ಸಂಚಲನ ಮೂಡಿಸಿದ್ದ ಬೆಳವಣಿಗೆಗಳು ಈಗ ಮಹಾರಾಷ್ಟ್ರದಲ್ಲಿ ಆಗುತ್ತಿದೆ. ಅಲ್ಲಿನ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ನಡವಳಿಕೆಯೇ ಇದಕ್ಕೆ ಕಾರಣ. ಮುಖ್ಯಮಂತ್ರಿಯಾದವರು ಸರ್ವಾಧಿಕಾರಿಯಾದರೆ ಹೀಗಾಗುತ್ತದೆ. ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಶಾಸಕರು ಸಿಡಿದೇಳುತ್ತಾರೆ ಎಂದರು.

ಶಾಸಕಾಂಗ ಪಕ್ಷದ ನಾಯಕರು ಸರಿಯಾಗಿ ಇರದಿದ್ದರೆ ಹೀಗೆಲ್ಲಾ ಆಗುತ್ತದೆ. ಶಾಸಕರ ಸ್ವಾಭಿಮಾನವನ್ನು ಕೆಣಕಬಾರದು. ಕೆಣಕಿದರೆ ಕ್ಷಿಪ್ರಕ್ರಾಂತಿ ಆಗೇ ಆಗುತ್ತದೆ. ನಾವೂ ಅದನ್ನೆ ಮಾಡಿದ್ದೆವು ಎಂದು ತಿಳಿಸಿದರು.

ಅಗ್ನಿಪಥ ಯೋಜನೆಯನ್ನು ಕಾಂಗ್ರೆಸ್‌ನವರು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಎಲ್ಲದಕ್ಕೂ ‍ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್ಎಸ್‌ ಲಿಂಕ್‌ ಮಾಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು.

ಪ್ರಧಾನಿ ನರೇಂದ್ರ ಮೋದಿ ನಮ್ಮೂರಿಗೇ (ಬೆಂಗಳೂರು, ಮೈಸೂರು) ಬಂದಾಗ, ನಮಗೆ ಏನು ಬೇಕೆಂದು ಸರ್ಕಾರದವರು ಕನಿಷ್ಠ ಮನವಿಯನ್ನೂ ಕೊಡಲಿಲ್ಲ. ಇದು ಬೇಸರ ತರಿಸಿದೆ. ಇಷ್ಟೊಂದು ಸಚಿವರು, ಶಾಸಕರು, ಜನಪ್ರತಿನಿಧಿಗಳಿದ್ದರೂ ಮನವಿ ಸಲ್ಲಿಸದಿರುವುದು ದೊಡ್ಡ ಅಪರಾಧ ಹಾಗೂ ತಪ್ಪಾಗಿದೆ ಎಂದರು.