ಮೈಸೂರು (Mysuru): ಸುಸಜ್ಜಿತವಾದ ಬೆಂಗಳೂರು ನಗರ ನಿರ್ಮಾಣದಲ್ಲಿ ನಾಡಪ್ರಭು ಕೆಂಪೇಗೌಡರ ಕೊಡುಗೆ ಅಪಾರ ಎಂದು ಶಾಸಕರಾದ ಜಿ.ಟಿ.ದೇವೇಗೌಡ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಾಡಪ್ರಭು ಕೆಂಪೇಗೌಡ ಜಯಂತೋತ್ಸವ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಇಂದು ಕಲಾಮಂದಿರದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೆಂಪೇಗೌಡರ ಕೊಡುಗೆಯಿಂದ ಇಂದು ಸುಂದರವಾದ ಬೆಂಗಳೂರು ನಗರ. ಕೆಂಪೇಗೌಡರು ಕೋಟೆ, ಕೆರೆಗಳನ್ನು ಹಾಗೂ ಎಲ್ಲಾ ಸಮಾಜದವರಿಗೂ ಕೂಡ 27 ಪೇಟೆಗಳನ್ನು ಬೆಂಗಳೂರಿನಲ್ಲಿ ನಿರ್ಮಾಣ ಮಾಡಿದ್ದಾರೆ. ಬೆಂಗಳೂರಿಗೆ ಹೆಬ್ಬಾಗಿಲನ್ನು ನಿರ್ಮಿಸುವ ಸಂದರ್ಭದಲ್ಲಿ ಅವರ ಗರ್ಭೀಣಿ ಸೊಸೆಯಾದ ಲಕ್ಷ್ಮಿ ದೇವಿಯವರು ಸ್ವತಃ ಆಹುತಿಯಾಗಿದ್ದರು ಎಂದು ಸ್ಮರಿಸಿದರು.
ಸಂಸದ ಪ್ರತಾಪ್ ಸಿಂಹ ಮಾತನಾಡಿ, ಬೆಂಗಳೂರನ್ನು ನಿರ್ಮಾಣ ಮಾಡಬೇಕಾದ ಸಂದರ್ಭದಲ್ಲಿ ಯಾವುದೇ ಆಧುನಿಕ ತಂತ್ರಜ್ಞಾನ ಯೋಜನೆಗಳು ಇರಲಿಲ್ಲ. ಇಂತಹ ವಾತಾವರಣದಲ್ಲಿ ಕೂಡ ಕೆಂಪೇಗೌಡರು ಪ್ರಶಸ್ತವಾದ ಸ್ಥಳವನ್ನು ಆಯ್ಕೆಮಾಡಿ ಬೆಂಗಳೂರನ್ನು ನಿರ್ಮಾಣ ಮಾಡಿದ್ದಾರೆ. ಬೆಂಗಳೂರು ಅನುಕೂಲ ವಾಸಕ್ಕೆ ಯೋಗ್ಯವಾದಂತಹ ವಾತಾವರಣವನ್ನು ಹೊಂದಿದೆ. ವರ್ಷದ 365 ದಿನವೂ ಕೂಡ ವಾಸದ ಅನುಕೂಲವಾಗುವಂಥ ಏಕೈಕ ನಗರ ಎಂದರೆ ಬೆಂಗಳೂರು ಮಾತ್ರ. ಇಂತಹ ನಗರ ನಿರ್ಮಾಣ ಮಾಡಿದ ವ್ಯಕ್ತಿಯನ್ನು ನಾವು ಧನ್ಯತಾಭಾವದಿಂದ ಅವರ ಸ್ಮರಣೆಯನ್ನು ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಾಮರಾಜ ಕ್ಷೇತ್ರದ ವಿಧಾನಸಭಾ ಸದಸ್ಯರಾದ ಎಲ್.ನಾಗೇಂದ್ರ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಸೋಮನಾಥ ಸ್ವಾಮೀಜಿ, ಮೈಸೂರು ಮಹಾನಗರ ಪಾಲಿಕೆಯ ಮಹಾಪೌರರಾದ ಸುನಂದಾ ಪಾಲನೇತ್ರ, ನರಸಿಂಹರಾಜ ಕ್ಷೇತ್ರದ ಶಾಸಕರಾದ ತನ್ವಿರ್ ಸೇಠ್, ವಿಧಾನ ಪರಿಷತ್ ಶಾಸಕರಾದ ಸಿ.ಎನ್.ಮಂಜೇಗೌಡ, ಜಿಲ್ಲಾಧಿಕಾರಿಗಳಾದ ಡಾ.ಬಗಾದಿ ಗೌತಮ್, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಎ.ಹೇಮಂತ್ ಕುಮಾರ್‌ಗೌಡ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷರಾದ ಎನ್.ಆರ್.ಕೃಷ್ಣಪ್ಪಗೌಡ, ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷರಾದ ಎನ್.ವಿ.ಫಣೀಶ್ ಉಪಸ್ಥಿತರಿದ್ದರು.