ಹೈದರಾಬಾದ್ : ಆಂಧ್ರಪ್ರದೇಶದ ಕುಪ್ಪಂನಲ್ಲಿ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್ ಕಟ್ಟಡದ 4ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಆತ್ಮಹತ್ಯೆಗೆ ಶರಣಾದ ಯುವತಿಯನ್ನು ಪಲ್ಲವಿ ಎಂದು ಗುರುತಿಸಲಾಗಿದೆ. ಆಕೆ ಕುಪ್ಪಂನ ಖಾಸಗಿ ಕಾಲೇಜೊಂದರಲ್ಲಿ 2ನೇ ವರ್ಷದ ಬಿಎಸ್ಸಿ ನರ್ಸಿಂಗ್ ಓದುತ್ತಿದ್ದಳು. ಯುವತಿ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಳು. ನ.20 ರಂದು ಆಕೆ ಹಾಸ್ಟೆಲ್ ಕಟ್ಟಡದಿಂದ ಜಿಗಿದಿದ್ದಳು.
ಗಾಯಗೊಂಡಿದ್ದ ಪಲ್ಲವಿಯನ್ನು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸೇರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ನ.21 ರಂದು ಆಕೆ ಸಾವನ್ನಪ್ಪಿದ್ದಾಳೆ ಎಂದು ಮೂಲಗಳು ತಿಳಿಸಿವೆ. ಹಾಸ್ಟೆಲ್ ಕಟ್ಟಡದಿಂದ ಆಕೆ ಜಿಗಿದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಯುವತಿಯ ಕುಟುಂಬಸ್ಥರು ಕಾಲೇಜು ಸಿಬ್ಬಂದಿಯೇ ಆಕೆಯ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ. ಪೊಲೀಸರು ಶಂಕಿತ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಈ ಘಟನೆ ಕಾಲೇಜು ಕ್ಯಾಂಪಸ್‌ನಲ್ಲಿರುವ ಇತರ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಲ್ಲಿ ಆಘಾತ ಉಂಟುಮಾಡಿದೆ. ವಿದ್ಯಾರ್ಥಿಗಳ ಪೋಷಕರು ಹಾಸ್ಟೆಲ್‌ಗಳಲ್ಲಿ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.














