ಬೆಂಗಳೂರು : ನಗರದಲ್ಲಿ ನಡೆದಿದ್ದ 7.11 ಕೋಟಿ ರೂ. ದರೋಡೆ ಪ್ರಕರಣದಲ್ಲಿ ಮತ್ತೆ 47 ಲಕ್ಷ ರೂ. ಪತ್ತೆಯಾಗಿದೆ. ಇದರಿಂದ ಪೊಲೀಸರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ದರೋಡೆ ಪ್ರಕರಣದ ತನಿಖೆ ತೀವ್ರಗೊಳಿಸಿದ ದಕ್ಷಿಣ ವಿಭಾಗ ಪೊಲೀಸರು ಸೋಮವಾರ (ನ.24) ರಾತ್ರಿ ಆರೋಪಿ ನವೀನ್ಗೆ ಸೇರಿದ ಕುಪ್ಪಂನ ಮನೆಯಲ್ಲಿ ಸುಮಾರು 47 ಲಕ್ಷ ರೂ. ಹಣ ಪತ್ತೆಯಾಗಿದೆ.
ಈ ಪ್ರಕರಣ ಆರೋಪಿಗಳ ಪೈಕಿ ನವೀನ್, ರವಿ ಸೇರಿದಂತೆ ಮೂವರನ್ನು ಹೈದರಾಬಾದ್ ಲಾಡ್ಜ್ವೊಂದರಲ್ಲಿ ಬಂಧಿಸಿದ್ದರು. ಈ ವೇಳೆ 54 ಲಕ್ಷ ರೂ. ಹಣವನ್ನು ಪೊಲೀಸರು ಜಪ್ತಿ ಮಾಡಿದ್ದರು. ಅದಾದ ಬಳಿಕ ಮೂವರ ವಿಚಾರಣೆ ನಡೆಸಿದಾಗ ಮನೆಯಲ್ಲಿಟ್ಟಿರುವುದಾಗಿ ನವೀನ್ ಬಾಯ್ಬಿಟ್ಟಿದ್ದಾನೆ. ಅದರಂತೆ ಪೊಲೀಸರು 47 ಲಕ್ಷ ರೂ.ಯನ್ನು ಸೀಜ್ ಮಾಡಿದ್ದಾರೆ.
ಇನ್ನುಳಿದ 10 ಲಕ್ಷ ರೂ.ಯನ್ನು ಸುಮನಹಳ್ಳಿ ಜಂಕ್ಷನ್ ಟೀ ಅಂಗಡಿ ಬಳಿ ಕೊಟ್ಟಿದ್ದ ಬಗ್ಗೆ ಮಾಹಿತಿ ಸಿಕ್ಕಿದ್ದು, ಅದರ ಹೊರತಾಗಿ ಸದ್ಯ ಪೊಲೀಸರು ಸಂಪೂರ್ಣ ಹಣ ಸೀಜ್ ಮಾಡಿದ್ದಾರೆ. ಈವರೆಗೆ 7.01 ಕೋಟಿ ರೂ. ಹಣ ಜಪ್ತಿಯಾಗಿದ್ದು, ಉಳಿದ ಹತ್ತು ಲಕ್ಷ ರೂ. ಪತ್ತೆಗೆ ತನಿಖೆ ಮುಂದುವರೆದಿದೆ. ಬಂಧಿತ ಆರೋಪಿಗಳ ಹಿನ್ನೆಲೆ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆರೋಪಿ ರವಿ ಮೇಲೆ ಒಂದು ಕ್ರಿಮಿನಲ್ ಕೇಸ್ ಇದ್ದರೆ, ಮತ್ತೊಬ್ಬನ ಮೇಲೆ ಕೊಲೆ ಕೇಸ್ ಇರುವುದು ಗೊತ್ತಾಗಿದೆ. ಸದ್ಯ ಒಂಭತ್ತು ಮಂದಿಯನ್ನ ಪೊಲೀಸ್ ಕಸ್ಟಡಿಗೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ.
ಈ ತನಿಖೆ ವೇಳೆ ಎಟಿಎಂ ವಾಹನ ಸಿಬ್ಬಂದಿ ನಿರ್ಲಕ್ಷ್ಯವಹಿಸಿದ ಸ್ವಾರಸ್ಯಕರ ವಿಚಾರ ಬೆಳಕಿಗೆ ಬಂದಿದೆ. ಏಳು ಕೋಟಿ ರೂ. ದರೋಡೆಯಾದರೂ, ವಾಹನ ಸಿಬ್ಬಂದಿ ಮಾತ್ರ ಇದು ಊಟದ ಸಮಯ ಎಂದು ಪೊಲೀಸರಿಗೆ ವಿಚಾರ ತಿಳಿಸದೇ ಊಟಕ್ಕೆ ತೆರಳಿದ್ದರಂತೆ. ಸದ್ಯ ಸಿದ್ದಾಪುರ ಪೊಲೀಸರು ಸಂಚಿನಲ್ಲಿ ಭಾಗಿಯಾಗಿ ಸಪೋರ್ಟ್ ಮಾಡಿದ ಇತರ ವ್ಯಕ್ತಿಗಳ ಬಗ್ಗೆಯೂ ಪರಿಶೀಲನೆ ನಡೆಸಿದ್ದಾರೆ.















