ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ತಾರಕಕ್ಕೇರಿರುವ ಸಂದರ್ಭದಲ್ಲೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶುವಕುಮಾರ್ ಮುಖಾಮುಖಿ ಆಗಿದ್ದಾರೆ. ಡಿಕೆಶಿ ಅವರಿಂದು ಸಿದ್ದರಾಮಯ್ಯರ ಅಧಿಕೃತ ಕಾವೇರಿ ನಿವಾಸಕ್ಕೆ ಭೇಟಿ ನೀಡಿದ್ದು, ಮುಖ್ಯಮಂತ್ರಿಗಳು ಆತ್ಮೀಯವಾಗಿ ವೆಲ್‌ಕಮ್ ಮಾಡಿದ್ದಾರೆ.
ಡಿಕೆಶಿ ಕಾವೇರಿ ನಿವಾಸಕ್ಕೆ ಆಗಮಿಸುತ್ತಿದ್ದಂತೆ ಆತ್ಮೀಯವಾಗಿ ಸ್ವಾಗತಿಸಿದ ಸಿಎಂ ಸಿದ್ದರಾಮಯ್ಯ ಬಳಿಕ ಸ್ಪೆಷಲ್ ರೂಮ್‌ನಲ್ಲಿ ಕುಳಿತು ಬ್ರೇಕ್‌ಫಾಸ್ಟ್ ಶುರು ಮಾಡಿದ್ದಾರೆ. ಅಲ್ಲಿಯೇ ಬಳಿಕ ಒನ್ ಟು ಒನ್ ಮೀಟಿಂಗ್ ಶುರು ಮಾಡಿದ್ದು, ಬೇರೆಯವರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಸದ್ಯ ಪೊಲಿಟಿಕಲ್ ಮೆನುವಿನಲ್ಲಿ ಸಾಕಷ್ಟು ಐಟಂಗಳಿದ್ದು, ಯಾರಿಗೆ ಕಾರಾಬಾತ್, ಯಾರಿಗೆ ಕೇಸರಿ ಬಾತ್ ಸಿಗುತ್ತೆ ಅನ್ನೋದು ಮೀಟಿಂಗ್ ಬಳಿಕ ತಿಳಿಯಲಿದೆ.
ಸಿಎಂ-ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ ಹಿನ್ನೆಲೆ ಸಿಎಂ ಕಾವೇರಿ ನಿವಾಸದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಹೆಚ್ಚುವರಿಯಾಗಿ 3 ಕೆಎಸ್‌ಆರ್‌ಪಿ ತುಕಡಿ, 2 ಬಸ್ ನಿಯೋಜನೆ ಮಾಡಲಾಗಿದೆ. ಅಸಲಿಗೆ, ಕಾಂಗ್ರೆಸ್ ಹೈಕಮಾಂಡ್ ನಿಂದಲೇ ಇಂಥದ್ದೊಂದು ಸೂಚನೆ ಬಂದಿತ್ತು. ಹೈಕಮಾಂಡ್ ಸೂಚನೆಯಂತೆ ಬ್ರೇಕ್‌ಫಾಸ್ಟ್ ಮೀಟಿಂಗ್ ಆಯೋಜನೆಗೊಂಡಿದೆ ಎನ್ನುತ್ತಿವೆ ಪಕ್ಷದ ಉನ್ನತ ಮೂಲಗಳು.
ಈಗ ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಎದ್ದಿರುವ ನಾಯಕತ್ವ ಬದಲಾವಣೆ ಸಮಸ್ಯೆಯನ್ನ ನೀವಿಬ್ಬರೇ ಕುಳಿತು ಬಗೆಹರಿಸಿಕೊಳ್ಳಿ. ಪರಸ್ಪರ ಭೇಟಿಯಾಗಿ ಚರ್ಚಿಸಿ ಒಂದು ತೀರ್ಮಾನಕ್ಕೆ ಬನ್ನಿ. ಕಿತ್ತಾಡಿಕೊಂಡು ಬಂದ್ರೆ ನಾವು ಸಂಧಾನ ಮಾಡಲ್ಲ ಎಂದು ಖುದ್ದು ಹೈಕಮಾಂಡ್ ನಾಯಕರೇ ಸೂಚಿಸಿದೆ. ಇಬ್ಬರೂ ಒಟ್ಟಿಗೆ ದೆಹಲಿಗೆ ಬನ್ನಿ ಅಂತ ರಾಹುಲ್ ಗಾಂಧಿ ಅವರು ಕಟ್ಟಾಜ್ಞೆ ಹೊರಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನ. 29ರಂದು ಬೆಳಗ್ಗೆ ಬ್ರೇಕ್ ಫಾಸ್ಟ್ ಮೀಟಿಂಗ್ ಕರೆಯಲಾಗಿದೆ ಎಂದು ಖುದ್ದು ಸಿದ್ದರಾಮಯ್ಯನವರೇ ಹೇಳಿದ್ದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಒಟ್ಟಿನಲ್ಲಿ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಅಧಿಕಾರ ಹಂಚಿಕೆ ಕಿತ್ತಾಟಕ್ಕೆ ಇಂದು ಬಹುತೇಕ ತೆರೆ ಬೀಳುವ ಸಾಧ್ಯತೆಯಿದೆ.














